ಕನ್ನಡದಲ್ಲಿ ವಚನಸಾಹಿತ್ಯ : ವಚನ ಕನ್ನಡದ ವಿಶಿಷ್ಟ ಸಾಹಿತ್ಯ ಪ್ರಕಾರ; ವೀರಶೈವಸಾಹಿತ್ಯದ ಮೊದಲ ಬೆಳೆ. ಈ ಸಾಹಿತ್ಯವನ್ನು ಐತಿಹಾಸಿಕವಾಗಿ ಬಸವಪುರ್ವಯುಗ, ಬಸವಯುಗ, ಬಸವೋತ್ತರಯುಗ ಎಂದು ವಿಭಾಗಿಸಲಾಗುತ್ತದೆ.

ಶಂಕರದಾಸಿಮಯ್ಯ, ಜೇಡರದಾಸಿಮಯ್ಯ, ಕೊಂಡಗುಳಿ ಕೇಶಿರಾಜ ಮೊದಲಾದವರು ಬಸವಪುರ್ವಯುಗದ ಶರಣರು. ಇವರಲ್ಲಿ ಚಾಳುಕ್ಯ 2ನೆಯ ಜಯಸಿಂಹನ (1015-44) ಅರಸಿ ಸುಗ್ಗಲೆಯ ಗುರುವಾದ ಜೇಡರದಾಸಿಮಯ್ಯನ ವಚನಗಳು ಲಬಿಸಿವೆ. 10ನೆಯ ಶತಮಾನದ ಉತ್ತರಾರ್ಧದಲ್ಲಿ ಹುಟ್ಟಿರಬಹುದಾದ ಈತನ ಗುರು ಶಂಕರದಾಸಿಮಯ್ಯನೂ ವಚನಗಳನ್ನು ರಚಿಸಿರಬಹುದು. ಜೇಡರ ದಾಸಿಮಯ್ಯನ ಹದಗೊಂಡ ಶೈಲಿಯೂ ಈ ಹೇಳಿಕೆಗೆ ಪುಷ್ಟಿ ನೀಡುತ್ತದೆ. ಅದಕ್ಕಾಗಿ ಈ ಸಾಹಿತ್ಯಪ್ರಕಾರದ ಪ್ರಾಚೀನತೆ 10ನೆಯ ಶತಮಾನದಷ್ಟು ಹಿಂದೆ ಸರಿಯಬಹುದಾಗಿದೆ. ಈ ಕಾಲದ ವಚನಗಳು ಅಲ್ಲಲ್ಲಿ ಅಂಶಲಯ ಒಳಪ್ರಾಸಯುಕ್ತವಾಗಿದ್ದು ಗಾತ್ರದಲ್ಲಿ ಚಿಕ್ಕವಾಗಿವೆ. ಕಡೆಗೀಲಿಲ್ಲದ ಬಂಡಿ ಹೊಡೆಗೆಡೆಯದಿಪ್ಪುದೆ, ಎತ್ತಪ್ಪೆ ಶರಣಂಗೆ, ತೊತ್ತಪ್ಪೆ ಶರಣಂಗೆ, ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ, ನಾನೊಂದು ಸುರಿಗೆಯನೇನೆಂದು ಹಿಡಿಯುವೆನು ಇತ್ಯಾದಿಯಾದ ಜೇಡರದಾಸಿಮಯ್ಯನ ವಚನಗಳು ಇದಕ್ಕೆ ನಿದರ್ಶನ. ಮುಂದಣ ಯುಗದ ವಚನಸಾಹಿತ್ಯದ ಮೇಲೆ ಇವುಗಳ ಪ್ರಭಾವ ಕೆಲಮಟ್ಟಿಗೆ ತೋರಿಬರುತ್ತದೆ. ಈ ಯುಗದ ವಚನ ಸಾಹಿತ್ಯ ಈಗ ಕಡಿಮೆ ಪ್ರಮಾಣದಲ್ಲಿ ಸಿಕ್ಕಿದ್ದರೂ ಶೋದಿಸಿದಲ್ಲಿ ಹೊಸ ವಚನಗಳು, ವಚನಕಾರರು ಹೊರಬರುವ ಸಂಭವವಿದೆ.

ಬಸವಯುಗ ವಚನಸಾಹಿತ್ಯದ ಸುಗ್ಗಿಕಾಲ. 12ನೆಯ ಶತಮಾನದ ಮಧ್ಯ ಭಾಗದಲ್ಲಿ ಮೈಮುರಿದು ಎದ್ದ ವೀರಶೈವ ಆಂದೋಲನ ಕನ್ನಡ ಸಮಾಜಕ್ಕೆ ಹೊಸ ತಿರುವು ಕೊಟ್ಟಿತು. ಆಚಾರ-ವಿಚಾರ, ಭಾಷೆ-ಸಾಹಿತ್ಯ ಮುಂತಾದ ಹಲವು ಕ್ಷೇತ್ರಗಳಲ್ಲಿ ಹೊಸತನ್ನು ತುಂಬಿತು. ಬಸವಣ್ಣ, ಚೆನ್ನಬಸವ, ಪ್ರಭುದೇವ, ಅಕ್ಕಮಹಾದೇವಿ, ಸಿದ್ಧರಾಮ - ಇವರು ಸುಪ್ರಸಿದ್ಧ ವಚನಕಾರರು. ಈ ಕಾಲದ ವಚನಸಂಖ್ಯೆ ಹಲವು ಸಾವಿರ, ಹಲವು ಲಕ್ಷ, ಕೋಟಿ ಎಂಬ ಹೇಳಿಕೆಗಳಿವೆ. ಕನ್ನಡ ಭಾಷೆಯ ಅಬಿsವ್ಯಕ್ತಿ ಸಾಧ್ಯತೆಯನ್ನು ತಳಮುಟ್ಟ ಕೈವಶಮಾಡಿಕೊಂಡ ವಚನಕಾರರು ಆ ಸಾಧ್ಯತೆಯನ್ನು ಇನ್ನೂ ಹಿಗ್ಗಿಸಿದರು. ಅನುಭವ ಹಾಗೂ ಅಬಿsವ್ಯಕ್ತಿಗಳಲ್ಲಿ ಪ್ರಾಮಾಣಿಕತೆಯನ್ನು ಸಾಧ್ಯಮಾಡಿ ತೋರಿಸಿದರು. ಈ ಆಂದೋಲನದ ಅದಿನಾಯಕ ಬಸವಣ್ಣ, ಕಾರ್ಯಚಟುವಟಿಕೆಗಳ ಕೇಂದ್ರಸ್ಥಳ ಕಲ್ಯಾಣ.

ಅಂದಿನ ಅನುಭವಮಂಟಪದ ಅಧ್ಯಕ್ಷನಾಗಿ ಮೆರೆದವನೆಂದರೆ ಅಲ್ಲಮಪ್ರಭು. ಈತ ಹಿರಿಯ ಆತ್ಮಜ್ಞಾನಿ, ನಿಜವಾದ ವೈರಾಗ್ಯವನ್ನು ಪಡೆದವ. ತನಗಿಂತ ಕಿರಿಯರಾದ ಬಸವಣ್ಣ, ಅಕ್ಕಮಹಾದೇವಿ, ಸಿದ್ಧರಾಮ ಮೊದಲಾದವರ ಧ್ಯೇಯ ಧೋರಣೆಗಳಲ್ಲಿನ ಇತಿಮಿತಿಗಳನ್ನು ಎತ್ತಿ ತೋರಿಸಿ ಅವರನ್ನು ಸರಿಯಾದ ಮಾರ್ಗಕ್ಕೆ ಕೊಂಡೊಯ್ದ ಹಿರಿಯ. ಈತ ತನ್ನ ವಚನಗಳಲ್ಲಿ ತಾನು ಕಂಡ ಸತ್ಯವನ್ನು ತನಗೆ ಹಿಡಿಸದ ಆಚಾರ-ವಿಚಾರಗಳನ್ನು ತೀಕ್ಷ್ಣವಾಗಿ ಪ್ರಸ್ತಾಪಿಸಿದ್ದಾನೆ. ಇವನಿಗೆ ತನ್ನವರು ಪರರು ಎಂಬ ಹಂಗಿಲ್ಲ. ಅನಾಚಾರವನ್ನು ಎಲ್ಲೇ ಕಾಣಲಿ ಈತ ಟೀಕಿಸುತ್ತಾನೆ. ವಚನಸಾಹಿತ್ಯದಲ್ಲೆಲ್ಲ ಈತನ ವಚನಗಳು ಅತಿ ಕಠಿಣವೆನಿಸಿವೆ. ಈತನ ಬೆಡಗಿನ ವಚನಗಳಂತೂ ಪಾರಿಭಾಷಿಕ ಸಂಕೇತಗಳಿಂದ ಕೂಡಿ ಭೇದಿಸಲಸಾಧ್ಯವಾಗಿವೆ:

ಹೊಟ್ಟೆಯ ಮೇಲೆ ಕಟ್ಟೋಗರದ ಮೊಟ್ಟೆಯ ಕಟ್ಟಿದೊಡೇನು?
ಹಸಿವು ಹೋಹುದೇ? ಅಂಗದ ಮೇಲೆ ಲಿಂಗಸ್ವಾಯತವಾದರೇನು?
ಇಟ್ಟ ಕಲ್ಲು ಮೆಳೆಯ ಮೇಲೆ ಸಿಕ್ಕಿದಡೆ ಆ ಕಲ್ಲು ಲಿಂಗವೆ?
ಆ ಮೆಳೆ ಭಕ್ತನೆ? ಇಟ್ಟಾತ ಗುರುವೆ? ಇಂತಪ್ಪವರ
ಕಂಡಡೆ ನಾನು ನಾಚುವೆನಯ್ಯ ಗುಹೇಶ್ವರಾ
ಮುನಿಯದಿರಿ, ಮುನಿಯದಿರಿ, ನಿಮಗೊಂದು ಯುಕ್ತಿಯ
ಹೇಳುವೆನು. ಅದೆಂತೆಂದೊಡೆ ನೀವೆನ್ನ ವಂಶೀಭೂತರಾದ
ಕಾರಣ ನಿಮ್ಮ ಹೆಚ್ಚು ಕುಂದು ಎನ್ನದಾಗಿ, ನಿಮ್ಮ ಆಸ್ತಿ ನಾಸ್ತಿ
ಎನ್ನದಾಗಿ, ನಿಮ್ಮ ಹಾನಿ ವೃದ್ಧಿ ಎನ್ನದಾಗಿ ಹಾವ ಹಿಡಿದವರು
ಬೇಲಿಯ ಹೊಗದೆ ಹೋಹರೇ ಅಯ್ಯ? ವ್ಯಾಧನು ಸೂಸಲ
ಚೆಲ್ಲಿ, ಜಂತ್ರವ ಹಣ್ಣಿ, ಅಡಿಗಲ್ಲನೊಡ್ಡಿ ಹೋದ ಬಳಿಕ,
ಸೂಸಲ ಕಂಪಿಂಗೆ ಹೆಗ್ಗಣ ಬಂದು ಬಿದ್ದಂತೆ ಬಿದ್ದಿರಲ್ಲಾ
ಮಾಯದ ಬಲೆಯಲ್ಲಿ! ಕೋಪವೆಂಬ ರಾಡನೊಡ್ಡಿ, ತಾಪವೆಂಬ
ಅರೆಗಲ್ಲನಿರಿಸಿ, ಹುಸಿ ಎಂಬ ಮೀಟುಗವಣೆಯ ಜಂತ್ರಿಸಿ,
ಹೊನ್ನು ಹೆಣ್ಣು ಮಣ್ಣೆಂಬ ಅಡಿಗಲ್ಲನೊಡ್ಡಿ ಕೆಡಹಿದನಲ್ಲಾ
ನಿಃಕರುಣೆ ಮುಕ್ಕಣ್ಣವ್ಯಾಧನು! ಹೊನ್ನು ಹೆಣ್ಣು ಮಣ್ಣಿ
ನಾಶೆಯ ಬಿಟ್ಟು, ಕೋಪ ತಾಪವಂ ಬಿಟ್ಟು, ಭ್ರಾಂತಿ
ಭ್ರಮೆಯಂ ಬಿಟ್ಟು, ಜಂಗಮವಾಗಬೇಕು ಕಾಣಿರೋ
ಮರುಳುಗಳಿರಾ! ಇಂತೀ ಷಡುಲೋಭದ ರುಚಿಯ
ಹಿಂಗಿ ಜಂಗಮನಾದಲ್ಲದೆ ಭವ ಹಿಂಗದು ಕಾಣಾ ಗುಹೇಶ್ವರಾ

ಅಲ್ಲಮನ ವಚನಗಳು ಬಸವಣ್ಣ ಅಥವಾ ಮಹಾದೇವಿಯಕ್ಕನ ವಚನಗಳಷ್ಟು ಜನಪ್ರಿಯವಾಗಿರದಿದ್ದರೂ ತಮ್ಮ ಆಳವಾದ ತತ್ತ್ವಸಾರದಿಂದ, ಶೈಲಿಯಿಂದ, ಕಾವ್ಯತ್ವದಿಂದ ಕಾಂತಿಯುಕ್ತವಾಗಿವೆ. ಉಳಿದವರಲ್ಲಿನ ಅತಿರೇಕಗಳಾವುವ ಅಲ್ಲಮನಲ್ಲಿ ಕಾಣವು. ಈ ದೃಷ್ಟಿಯಿಂದ ಇವನ ವಚನಗಳು ವ್ಯಾಸಂಗಯೋಗ್ಯವಾಗುತ್ತವೆ.

ಭಕ್ತಿಭಂಡಾರಿ ಎಂಬ ಕೀರ್ತಿಗೆ ಭಾಜನನಾದ ಬಸವಣ್ಣನ ವಚನ ಗಳಲ್ಲಿ ಭಕ್ತಿಯ ಅತಿರೇಕವನ್ನು ಕಾಣುತ್ತೇವೆ. ಹೆಂಗರುಳಿನ ಸಹಾನು ಭೂತಿಯನ್ನು ಕಾಣುತ್ತೇವೆ. ಒಂದು ದೇಶದ ಮಹಾಮಂತ್ರಿ ಯಾಗಿದ್ದರೂ ಈತ ಅಹಂಕಾರಪಟ್ಟವನಲ್ಲ. ಜಂಗಮಸೇವೆಯೇ ಲಿಂಗದ ಸೇವೆ ಎಂದು ತನ್ನ ತನುಮನಧನಗಳನ್ನು ಜಂಗಮ ದಾಸೋಹಕ್ಕಾಗಿ ಮುಡಿಪಾಗಿಟ್ಟ ಭಕ್ತಶ್ರೇಷವಿನೀತ. ಅನುಕಂಪ, ಜೀವನಾನುಭವದ ಸಾರ, ರಸಾದರ್ರ್‌ಹೃದಯ, ಲೋಕಹಿತ ಸಾಧನೆಯ ಉದ್ದೇಶ - ಇವು ಕ್ಷಣಕ್ಷಣಕ್ಕೂ ಈತನ ವಚನಗಳಲ್ಲಿ ಕಾಣುತ್ತವೆ. ಮತೋಪದೇಶ ಕ್ಕೆಂದೇ ಕಟ್ಟಿದವಾದರೂ ಈತನ ವಚನಗಳಲ್ಲಿ ಹೃದ್ಯವಾದ ರಸಭಾವ ಮಿಡಿವ ಮಾತುಗಳು ಉದ್ದಕ್ಕೂ ಬರುತ್ತವೆ:

ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ!
ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ!
ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ!
ನಿಮ್ಮ ಶರಣರ ಪಾದವಲ್ಲದೆ ಅನ್ಯವಿಷಯಕ್ಕೆಳಸದಂತೆ ಇರಿಸು 
ಕೂಡಲಸಂಗಮದೇವ

ನಾದಪ್ರಿಯನಲ್ಲ, ವೇದಪ್ರಿಯನಲ್ಲ ಭಕ್ತಿಪ್ರಿಯ ನಮ್ಮ
ಕೂಡಲಸಂಗಮದೇವ	

ಸಂಸಾರಸಾಗರ ತೆರೆಕೊಬ್ಬಿ, ಮುಖದ ಮೇಲೆ ಅಲೆವುತ್ತಲಿದ್ದುದೇ?
ಸಂಸಾರಸಾಗರ ಉರದುದ್ದವೇ ಹೇಳಾ?
ಸಂಸಾರಸಾಗರ ಕೊರಳುದ್ದವೇ ಹೇಳಾ?
ಸಂಸಾರಸಾಗರ ಶಿರದುದ್ದವಾದ ಬಳಿಕ ಏನ ಹೇಳುವೆನಯ್ಯ? ಅಯ್ಯಾ
ಅಯ್ಯಾ, ಎನ್ನ ಹುಯ್ಯಲ ಕೇಳಯ್ಯ ಕೂಡಲಸಂಗಮದೇವಯ್ಯ

ನಾನೇವೆನಯ್ಯ 
ಕಾಂಚನವೆಂಬ ನಾಯ ನಚ್ಚಿ ನಿಮ್ಮ ನಾನು ಮರೆದೆನಯ್ಯ!
ಕಾಂಚನಕ್ಕೆ ವೇಳೆಯಲ್ಲದೆ ಲಿಂಗಕ್ಕೆ ವೇಳೆಯಿಲ್ಲ ಹಡಕಿಗೆ
ಮೆಚ್ಚಿದ ಸೊಣಗನು ಅಮೃತದ ರುಚಿಯ ಬಲ್ಲುದೆ
ಕೂಡಲಸಂಗಮದೇವ

ಹೀಗೆ ಬಸವಣ್ಣನಿಂದ ನೂರಾರು ಉತ್ತಮ ವಚನಗಳನ್ನು ಎತ್ತಿ ತೋರಿಸಬಹುದು. ಷಟ್ಪದಿಕಾರರಲ್ಲಿ ಕುಮಾರವ್ಯಾಸ, ದಾಸರಲ್ಲಿ ಪುರಂದರದಾಸ ಇರುವಂತೆ ವಚನಕಾರರಲ್ಲಿ ಬಸವಣ್ಣ ಬಹುಜನಪ್ರಿಯ.
ವಚನಸಾಹಿತ್ಯ ಪ್ರಧಾನವಾಗಿ ಅನುಭಾವಸಾಹಿತ್ಯ, ಭಕ್ತಿ ಸಾಹಿತ್ಯ. ಅಂಥವರಲ್ಲಿ ಜ್ಞಾನಮಾರ್ಗವನ್ನೇ ಹೆಚ್ಚಾಗಿ ಎತ್ತಿಹಿಡಿದವನೆಂದರೆ ಚೆನ್ನಬಸವಣ್ಣ. ಮುಕ್ತಿ ಸಾಧನೆಯ ಮಾರ್ಗಗಳಲ್ಲೆಲ್ಲ ಇದು ಕಠಿಣತಮವಾದುದು:	
ಹೆಗ್ಗಣವನಿಕ್ಕಿ ನೆಲಗಟ್ಟು ಕಟ್ಟಿದಂತೆ ಆಯಿತ್ತೆನ್ನ ಕಾಯಗುಣ
ಅಹಂಕಾರ ಪ್ರಬೋಧೆಗಳೇಕಯ್ಯ? ಕಾಮ ಕ್ರೋಧ ಲೋಭ
ಮೋಹ ಮದ ಮತ್ಸರಂಗಳನಿಕ್ಕಿ ಎನ್ನ ಮಾಡಿದಿರಿ, ಎನ್ನ
ಬಾದಿಸಲಿಂತು ಲಿಂಗಯ್ಯ ತಂದೆ? ಆದಿ ವ್ಯಾದಿಗಳೆಲ್ಲವ
ಕಳೆದು ನಿರ್ವಾಣವಪ್ಪ ಪದವ ಕರುಣಿಸಯ್ಯ 
ಕೂಡಲಚೆನ್ನಸಂಗಮದೇವ

ತಾಳು ಬೋಳು ಕಪ್ಪರವೆಂತೆಂಬರು, ತಾಳಾವುದು, ಬೋಳಾವುದು,
ಕಪ್ಪರವಾವುದೆಂದರಿಯರು, ಕಾಯದ ಕಳವಳದ ಗುಣವ
ತಾಳಬಲ್ಲಡೆ ತಾಳು, ಸಂಸಾರವಿಷಯವ ಬೋಳಿಸಬಲ್ಲಡೆ
ಬೋಳು, ಪರದಲ್ಲಿ ಪರಿಣಾಮಿಸಬಲ್ಲಡೆ ಕಪ್ಪರ, ಇಂತಿಲ್ಲ
ದಿದ್ದಡೆ ನಮ್ಮ ಕೂಡಲಚೆನ್ನಸಂಗಯ್ಯನಲ್ಲಿ ಡೊಂಬರ ಬೋಳು.

ಬಸವಣ್ಣನವರೇ ತನ್ನ ಗುರುವೆಂದೂ ಇಷ್ಟಲಿಂಗವನ್ನು ದಯಪಾಲಿಸಿ ತನ್ನನ್ನು ಉದ್ಧರಿಸಿದ ಮಹಾತ್ಮರೆಂದೂ ಹೇಳಿಕೊಂಡ ಚೆನ್ನಬಸವಣ್ಣ ಶುದ್ಧ ಜ್ಞಾನಮಾರ್ಗದ ಬೋಧಕನಾಗಿ ಹೆಸರು ಪಡೆದಿದ್ದಾನೆ.

ಸಿದ್ಧರಾಮಯೋಗಿ ಕರ್ಮಯೋಗಿ, ಪರೋಪಕಾರ, ವಿದ್ಯಾಪ್ರಸಾರ ಮೊದಲಾದ ಸಮಾಜಸೇವೆಯೇ ತನ್ನ ಜೀವನದ ಧ್ಯೇಯವೆಂದು ಸಾರಿದಾತ. ಕೆರೆ ಕಟ್ಟಿಸುವುದು, ಮಠಾದಿಗಳನ್ನು ನಿರ್ಮಿಸುವುದು ಮುಂತಾದ ಕೆಲಸಗಳಲ್ಲಿ ನಿರತನಾಗಿದ್ದವ. ಇವನ ಉಪದೇಶವನ್ನು ಮೆಚ್ಚಿದ ಸಹಸ್ರಾರು ಶಿಷ್ಯರು ಇವನೊಡನೆ ಸೇರಿ ಕಾಯಕನಿರತರಾಗಿದ್ದರು:

ಕೃಷಿಯ ಮಾಡಿ ಉಣ್ಣದೆ, ಹಸಿವು ಹರಿವ ಪರಿ ಇನ್ನೆಂತೋ?
ಕರ್ಮಯೋಗವ ಮಾಡದೆ ನಿರ್ಮಲ ಸುಚಿತ್ತವನರಿವ ಪರಿ ಇನ್ನೆಂತೋ? 
ಬೇಯದೆ ಅಶನನುಂಬ ಠಾವಾವುದು ಕಪಿಲಸಿದ್ಧ ಮಲ್ಲಿಕಾರ್ಜುನ ಲಿಂಗಕ್ಕೆ?

ಮಹಾದೇವಿಯಕ್ಕ ಬಸವಣ್ಣನಂತೆ ಬಹು ಜನಪ್ರಿಯಳಾದ ವಚನಕಾರ್ತಿ. ವೈರಾಗ್ಯವನ್ನೂ ಶರಣಸತಿ ಲಿಂಗಪತಿ ಎಂಬ ತತ್ತ್ವವನ್ನೂ ಜೀವನದಲ್ಲಿ ಅನುಸರಿಸಿದಳಲ್ಲದೆ ವಚನಗಳಲ್ಲಿ ಬೋದಿಸಿದಳು. ದೇವರ ಹಂಬಲವನ್ನೇ ವಸ್ತುವನ್ನಾಗುಳ್ಳ ಈಕೆಯ ವಚನಗಳು ಉತ್ತಮ ಕಾವ್ಯಗುಣವನ್ನು ಪಡೆದಿವೆ:

ಹಸಿವಾದಡೆ ಭಿಕ್ಷಾನ್ನಗಳುಂಟು, ತೃಷೆಯಾದಡೆ ಕೆರೆ ಹಳ್ಳಬಾವಿ ಗಳುಂಟು, ಶಯನಕ್ಕೆ ಹಾಳು ದೇಗುಲಗಳುಂಟು, ಚೆನ್ನಮಲ್ಲಿಕಾರ್ಜುನಯ್ಯ, ಆತ್ಮಸಂಗಾತಕ್ಕೆ ನೀನೆನಗುಂಟು
ವನವೆಲ್ಲನೀವೆ ವನದೊಳಗಣ ದೇವತರುವೆಲ್ಲ ನೀವೆ, ತರುವಿನೊಳ ಗಾಡುವ ಖಗಮೃಗವೆಲ್ಲನೀವೆ. ಚೆನ್ನಮಲ್ಲಿಕಾರ್ಜುನ ಸರ್ವಭರಿತನಾಗಿ ಎನಗೆ ಮುಖದೋರ

ವಚನಸಾಹಿತ್ಯದ ಹಿರಿಮೆಯನ್ನು ಶ್ರುತಪಡಿಸಲು ಇಲ್ಲಿ ಹೀಗೆ ಕೆಲವು ಉದಾಹರಣೆಗಳನ್ನು ಮಾತ್ರ ಕೊಡಲಾಗಿದೆ. ನಿಜವಾಗಿ ವಚನಸಾಹಿತ್ಯದ ಮುತ್ತು ರತ್ನಗಳನ್ನೆಲ್ಲ ಆಯ್ದು ಒಂದೆಡೆ ಇಟ್ಟು ನೋಡಿದಲ್ಲಿ ಅವುಗಳ ಯೋಗ್ಯತೆ, ಹಿರಿಮೆ ತಿಳಿಯುತ್ತದೆ. ಅಂದಿನಿಂದ ಇಂದಿನವರೆಗೂ ಅವುಗಳ ಕಾಂತಿ ಮಾಸಿಲ್ಲ.

13-14ನೆಯ ಶತಮಾನಗಳಲ್ಲಿ ವೀರಶೈವ ಶರಣರು ಆಂಧ್ರ ಪ್ರದೇಶದ ಓರಂಗಲ್ಲು, ಶ್ರೀಶೈಲ; ಮಧ್ಯಕರ್ನಾಟಕದ ಉಳವಿ, ಹಂಪೆ, ದ್ವಾರಸಮುದ್ರಗಳಲ್ಲಿ ನೆಲೆನಿಂತರು. ವಚನರಚನೆ ಇಳಿಮುಖವಾಯಿತು. ವಚನಕಾರರ ಬದುಕನ್ನು ಬರೆಹಕ್ಕೆ ಇಳಿಸುವ ಕೆಲಸ ಪ್ರಾರಂಭವಾಯಿತು. ವೀರಶೈವ ಸಾಹಿತ್ಯದಲ್ಲಿ ಚರಿತ್ರೆ ಮತ್ತು ಪುರಾಣಗಳ ಯುಗ ಪ್ರಾರಂಭವಾಯಿತು. ಆದರೂ ವೀರಶೈವಕ್ಕೆ ಸ್ಥಿರನೆಲೆ ಸಿಕ್ಕಿದ್ದು ನೂರೊಂದು ವಿರಕ್ತರು ಬಾಳಿದ ಪ್ರೌಢದೇವರಾಯನ ಕಾಲದಲ್ಲಿ. ವಿಪ್ಲವಕ್ಕೆ ಗುರಿಯಾಗಿ ನಷ್ಟಗೊಳ್ಳುತ್ತಿದ್ದ ಮತ್ತು ಪುರಾಣರಚನೆಯಿಂದ ಅಲಕ್ಷಿಸಲ್ಪಟ್ಟ ಹಿಂದಣ ವಚನಸಾಹಿತ್ಯದ ಸಂಗ್ರಹ, ಸಂಕಲನ, ಸಂಪಾದನಕಾರ್ಯ ಪ್ರಾರಂಭವಾಯಿತು. ಈ ಕಾರ್ಯವನ್ನು ನಿರ್ವಹಿಸಿದವರಲ್ಲಿ ಮಹಲಿಂಗ ಮೊದಲಾದವರೂ ಪ್ರೇರಣೆ ಕೊಟ್ಟವರಲ್ಲಿ ಲಕ್ಕಣದಂಡೇಶ ಮುಂತಾದವರೂ ಪ್ರಮುಖರು. ಇವರ ಪ್ರಯತ್ನದಿಂದಾಗಿ ಸಕಲಪುರಾತನರ ವಚನ, ಏಕೋತ್ತರಶತಸ್ಥಲ, ಲಿಂಗಲೀಲಾ ವಿಲಾಸಚಾರಿತ್ರ ಮೊದಲಾದ ಗ್ರಂಥಗಳಲ್ಲಿ ವಚನಗಳು ತತ್ತ್ವದ ತಳಹದಿಯ ಮೇಲೆ ಸೂತ್ರಬದ್ಧವಾಗಿ ಹೆಣೆಯಲ್ಪಟ್ಟವು. ಹೀಗೆ ವಚನಸಾಹಿತ್ಯ ಹೊಸ ರೂಪವನ್ನು ರೂಪಿಸಿಕೊಂಡು ಮುನ್ನಡೆಯಿತು. ಶಿವನಿಷ್ಠೆಯ ಸಂಗಮವಂಶ ಕೊನೆಗೊಂಡ 15ನೆಯ ಶತಮಾನದಲ್ಲಿ ನಡೆದ ವಚನಸಾಹಿತ್ಯ ಸಂಬಂಧವಾದ ಆಂದೋಲನದ ಕೇಂದ್ರವ್ಯಕ್ತಿ ತೋಂಟದ ಸಿದ್ಧಲಿಂಗ; ಷಟ್ಸ್ಥಲದ ಇತಿಹಾಸದಲ್ಲಿ ಎರಡನೆಯ ಚೆನ್ನಬಸವಣ್ಣನೆನಿಸಿದ. ಈತನ ದೈವೀಬೆಂಬಲದಿಂದ ವಚನಗಳ ಸಂಕಲನ, ಸಂಪಾದನೆ ಇನ್ನೂ ತೀವ್ರಗೊಂಡಿತು. ಈ ಜಾಗೃತ ಸಮಯದಲ್ಲಿ ಹುಟ್ಟಿದ ನಾಲ್ಕು ಶೂನ್ಯಸಂಪಾದನೆಗಳಲ್ಲಿ ಕೊನೆಯವೆರಡು ಈತನ ಶಿಷ್ಯವರ್ಗದವರಿಂದ ರಚನೆಗೊಂಡುದು ಗಮನಿಸಬೇಕಾದ ಸಂಗತಿ. ಸಾಲದುದಕ್ಕೆ ಈತನ ಶಿಷ್ಯರಲ್ಲಿ ಸಂಪಾದನೆಯ ಒಂದು ಶಿಷ್ಯಪರಂಪರೆಯೇ ಮುಂದುವರಿಯಿತು. ಈ ಸಂಪ್ರದಾಯಕ್ಕೆ ಸಂಬಂದಿಸಿದ ಸಂಪಾದನೆಯ ಚೆನ್ನಂಜೆದೇವ, ಸಂಪಾದನೆಯ ಬೋಳಬಸವದೇವ, ಸಂಪಾದನೆಯ ಗುರುಶಾಂತದೇವ, ಸಂಪಾದನೆಯ ಸಿದ್ಧವೀರಣಾರ್ಯ ಮೊದಲಾದವರು ಕಾರಣವಾಗಿ ಲಿಂಗವಿಕಳಾವಸ್ಥೆಯ ವಚನ, ಮಿಶ್ರ ಸ್ತೋತ್ರದ ವಚನ, ಆಚರಣೆಯ ವಚನ, ಬಸವಸ್ತೋತ್ರದ ವಚನ, ಶರಣಸ್ತೋತ್ರದ ವಚನ - ಇತ್ಯಾದಿ ಹೊಸ ಹೊಸ ವಚನಸಂಕಲನ ಗ್ರಂಥಗಳು ಹೊರಬಂದುವು. ಹೀಗೆ ಬಸವಣ್ಣನ ತರುವಾಯದ ಅವದಿ ವಚನಗಳ ಸಂಕಲನ, ಸಂಪಾದನೆಗಳ ಯುಗವೆನಿಸಿದರೂ ತೋಂಟದ ಸಿದ್ಧಲಿಂಗ, ಘನಲಿಂಗಿದೇವ, ಕಾಡಸಿದ್ಧ, ಷಣ್ಮುಖಸ್ವಾಮಿ ಮೊದಲಾದವರು ವಚನಗಳನ್ನೂ ರಚಿಸಿದ್ದಾರೆ. ಗುಣ, ಗಾತ್ರ ಎರಡು ದೃಷ್ಟಿಯಿಂದಲೂ ಇವರ ವಚನಗಳು ಬಸವಯುಗದ ವಚನಗಳ ಎತ್ತರಕ್ಕೆ ಬಾರವು.

ಶರಣರು ತ್ರಿವಿಧಿ, ಮಂತ್ರಗೋಪ್ಯ, ಕರಣಹಸಿಗೆ, ವಿವಿಶ್ರಾರ್ಪಣ ಇತ್ಯಾದಿ ಪ್ರಕಾರಗಳನ್ನು ನಿರ್ಮಿಸಿದ್ದರೂ ವಚನ ಪ್ರಕಾರ ಅವರ ವ್ಯಕ್ತಿಸಿದ್ಧಿಯ ಪತಾಕೆ. ಇದರಲ್ಲಿ ವಚನ, ಸ್ವರವಚನವೆಂದು ಎರಡು ವಿಧಗಳುಂಟು. ಒಂದು ಅನುಭಾವದ ಗದ್ಯ ಪ್ರಕಾರ, ಇನ್ನೊಂದು ಅನುಭಾವದ ಗೀತಪ್ರಕಾರ. ವಚನಗಳು ತಮ್ಮ ಉಜ್ಜ್ವಲ ಸಾಹಿತ್ಯದಿಂದ, ಸ್ವರವಚನಗಳು ತಮ್ಮ ಗೇಯ ಗುಣದಿಂದ ಸಮಸ್ತ ಸಹೃದಯರನ್ನೂ ಆಕರ್ಷಿಸಿವೆ.
ಪ್ರತಿಯೊಬ್ಬ ಶರಣನ ವಚನ ಮತ್ತು ಸ್ವರವಚನಗಳ ಕೊನೆಗೆ ಕೃತಿಕಾರನನ್ನು ಸೂಚಿಸುವ, ಆರಾಧ್ಯದೈವನಾಮಾಂಕಿತವಾದ ಮುದ್ರೆ ಇರುತ್ತದೆ. ಕೂಡಲ ಸಂಗಮದೇವ, ಕೂಡಲ ಚೆನ್ನಸಂಗಮದೇವ ಹೀಗೆ ಒಂದೊಂದು ದೇವತೆಯ ಸುತ್ತ ಇರುವ ಕೆಲವು ಅಂಕಿತಗಳು ಒಂದೊಂದು ವರ್ಗವನ್ನು ನಿರ್ಮಿಸುತ್ತವೆ.

ಗಾತ್ರದೃಷ್ಟಿಯಿಂದ ವಚನ ಒಂದು ಬಿಡಿ ಮುಕ್ತಕ. ಸ್ವರವಚನ 3-5, 7-9 ನುಡಿಗಳ ಒಂದು ಪುಂಜ. ಹಾಡುಗಬ್ಬಗಳಾದ ಈ ಸ್ವರವಚನಗಳು ಬಸವ ಮೊದಲಾದವರಿಂದ ಪ್ರವೃತ್ತವಾಗಿದ್ದು ಮುಂದೆ ಬಂದ ನಿಜಗುಣಶಿವಯೋಗಿ, ಮುಪ್ಪಿನ ಷಡಕ್ಷರಿ, ಸರ್ಪಭೂಷಣ ಶಿವಯೋಗಿ, ಬಾಲಲೀಲಾಮಹಾಂತ ಶಿವಯೋಗಿ, ಕಡಕೋಳ ಮಡಿವಾಳಪ್ಪ, ಮೈಲಾರದ ಬಸವಲಿಂಗ ಶರಣ ಮೊದಲಾದವರ ಕೈಯಲ್ಲಿ ಉಚ್ಛ್ರಾಯಸ್ಥಿತಿಗೇರಿದುವು. ವಚನಸಾಹಿತ್ಯದ ಈ ರಮ್ಯ ಮಾರ್ಗ ವಿಕಾಸಗೊಂಡು ಹಲವು ಬಗೆಯಾಗಿ ಬೆಳೆದಿರುವುದನ್ನು ಮುಂದಿನ ದಾಸಸಾಹಿತ್ಯದಲ್ಲೂ ಇಸ್ಲಾಮೀ ಅನುಭಾವ ಸಾಹಿತ್ಯದಲ್ಲೂ ಕಾಣಬಹುದಾಗಿದೆ.

ವಚನಗಳು ಚರಿತ್ರೆ, ತತ್ತ್ವ, ಸಾಹಿತ್ಯ ದೃಷ್ಟಿಗಳಿಂದ ಅಮೂಲ್ಯ ವೆನಿಸಿವೆ. ತಾವು ಸತ್ಯವನ್ನು ಕಂಡ ಉಂಡ ಅನುಭವವನ್ನು ಅಬಿsವ್ಯಕ್ತಗೊಳಿಸುವಲ್ಲಿ ಕೆಲವು ಸಲ ಶರಣರ ವ್ಯಕ್ತಿಗತ ಅಂಶಗಳೂ ವಚನಗಳಲ್ಲಿ ನುಸುಳಿಬಂದಿವೆ. ‘ಆರು ಜನ್ಮದವ ಬಸವಣ್ಣನೆಂಬರು ಈ ಗಾರುಮಾತ ಕೇಳಲಾಗದು, ಆನು ಹಾರುವನೆಂದರೆ ಕೂಡಲಸಂಗಯ್ಯ ನಗುವನಯ್ಯ, ಕೆಟ್ಟಿತ್ತು ಕಲ್ಯಾಣ ಹಾಳಾಯಿತ್ತು ನೋಡಾ ಒಬ್ಬ ಜಂಗಮದ ಅಬಿಮಾನದಿಂದ, ಎನ್ನ ಸತಿ ನೀಲಲೋಚನೆ ಪೃಥ್ವಿಗಗ್ಗಳ ಚಲುವೆ’ ಇಂಥ ಅಂಶಗಳು ಶರಣರ ಚರಿತೆ ಬರೆಯುವಲ್ಲಿ ಪ್ರಮಾಣಗಳಾಗಿ ನಿಲ್ಲುತ್ತವೆ.

ವಚನಗಳಲ್ಲಿ ಹೆಚ್ಚು ಸ್ಪಷ್ಟವಾಗಿ ಸಮಕಾಲೀನ ಸಮಾಜ ಚಿತ್ರ ಮೂಡಿದೆ. ‘ಮಾರಿಕವ್ವೆಯನೋಂತು ಕೊರಳಲ್ಲಿ ಕಟ್ಟಿಕೊಂಬರು, ಮರನ ಗೋಟಿಗೆ ಬರ್ಪ ಕಿರುಕುಳದೈವಕ್ಕೆ ಕುರಿಯನಿತ್ತಿಹೆವೆಂದು ನಲಿನಲಿದಾಡುವರು, ವಿಷ್ಣುವ ಪುಜಿಸಿ ಮುಡಿಹ ಸುಡಿಸಿಕೊಂಬುದ ಕಂಡೆ, ಜಿನನ ಪುಜಿಸಿ ಬತ್ತಲೆಯಪ್ಪುದ ಕಂಡೆ, ಮೈಲಾರನ ಪುಜಿಸಿ ನಾಯಾಗಿ ಬೊಗಳುವುದ ಕಂಡೆ’ ಇಂಥ ಈ ವ್ಯಕ್ತಿಗತ ಸಂಗತಿ ಮತ್ತು ಸಮಾಜ ಚಿತ್ರಣಗಳಿಗಿಂತ ಶರಣರಿಗೆ ಮುಖ್ಯವಾದುದು ವೀರಶೈವಧರ್ಮದ ತತ್ತ್ವ ಮತ್ತು ಆಚರಣೆಗಳ ಪ್ರತಿಪಾದನೆ. ಹೀಗಾಗಿ ಷಟ್ಸ್ಥಲ, ಅಷ್ಟಾವರಣ, ಪಂಚಾಚಾರ ಇತ್ಯಾದಿಗಳ ತಾತ್ತ್ವಿಕ ವಿವೇಚನೆ ಅಲ್ಲಿ ವಸ್ತುವಾಗಿ ನಿಂತಿತು. ಕಾಯಕ, ಜಾತಿಭೇದ ನಿರ್ಮೂಲನ, ಸ್ತ್ರೀಪುರುಷ ಸಮಾನತೆ - ಮುಂತಾದ ಆಚರಣೆಗಳು ಅಲ್ಲಿ ಪ್ರತಿಪಾದಿಸಲ್ಪಟ್ಟು ಕಾಯಕವೇ ಕೈಲಾಸ, ಸಕಲ ಜೀವಾತ್ಮರಿಗೆ ಲೇಸ ಬಯಸುವನೇ ಕುಲಜ, ದಯವೇ ಧರ್ಮದ ಮೂಲ, ಅರಿವೇ ಗುರು, ದೇವನೊಬ್ಬ ನಾಮ ಹಲವು ಕೂಡಲಸಂಗನ ಒಲಿಸಲು ಬಂದ ಪ್ರಸಾದಕಾಯವ ಕೆಡಿಸಲಾಗದು, ಭಕ್ತಿ ಪ್ರಿಯ ನಮ್ಮ ಕೂಡಲಸಂಗಮ ದೇವ, ಆಚಾರವೇ ಸ್ವರ್ಗ ಅನಾಚಾರವೇ ನರಕ ಎಂಬ ಲೋಕಮಾನ್ಯ ವಿಚಾರಗಳು ಆವಿರ್ಭವಿಸಿದುವು. ಹೀಗೆ ಹೊಸ ಆಚಾರ ಹೊಸ ವಿಚಾರಗಳನ್ನು ತುಂಬಿಕೊಂಡ ವಚನಗಳು ಹೊಸ ಭಾಷೆ ಹೊಸ ಸಾಮಗ್ರಿ ಹೊಸ ಸಂವೇದನೆಗಳನ್ನು ಹೊತ್ತು ಹೊರಬಂದುವು. ಇದರ ಫಲವಾಗಿ ಕಮ್ಮಟ, ಗಂಜಳ, ಹನ್ನಿಬ್ಬರು, ಉಳ್ಳವರು, ಮೇಳಾಪ, ತುಯ್ಯಲ ಇತ್ಯಾದಿ ದೇಶೀಪದಗಳು ಸಾಹಿತ್ಯದಲ್ಲಿ ಸಾರ್ಥಕಗೊಂಡುವು. ಬದುಕಿನ ಹಂಚು ಹರಳು ಇತ್ಯಾದಿ ವಸ್ತುಕೋಟಿಯೆಲ್ಲ ಅವರ ಕೈಯಲ್ಲಿ ಹದವಾಗಿ ಬಳಕೆಗೊಂಡುವು. ಅವರವರ ಕಾಯಕಗಳು ವಚನಗಳಲ್ಲಿ ರೂಪಕ ರೂಪತಾಳಿ ಶೋಬಿಸಿದುವು. ಇದರಿಂದ ಕನ್ನಡ ಭಾಷೆಯ ಅಬಿವ್ಯಕ್ತಿ, ಸತ್ತ್ವ ಸಾವಿರ ಪಾಲು ವಿಸ್ತಾರಗೊಂಡಿತು.

ಸಾಮಾನ್ಯವಾಗಿ ವಚನ ಸಾಹಿತ್ಯವೆಂದರೆ ಸ್ವಾನುಭವ ಲೋಕಾನುಭವಗಳ ಸಂಗಮ. ಶೈಲಿದೃಷ್ಟಿಯಿಂದ ಈ ಸಾಹಿತ್ಯವನ್ನು ಪ್ರಸನ್ನಶೈಲಿ, ಬೆಡಗಿನ ಶೈಲಿ, ಶಾಸ್ತ್ರಶೈಲಿಯೆಂದು ವಿಭಾಗಿಸಬಹುದು. ಪ್ರಸನ್ನಕ್ಕೆ ಬಸವ, ಬೆಡಗಿಗೆ ಪ್ರಭುದೇವ, ಶಾಸ್ತ್ರಕ್ಕೆ ಚೆನ್ನಬಸವ ಇವರ ವಚನಗಳು ಮಾದರಿ. ಆಡುಮಾತಿನ ಕೆಚ್ಚು, ಕಮನೀಯತೆ, ಅನುಭವದ ಪ್ರಾಮಾಣಿಕತೆ, ಅಬಿsವ್ಯಕ್ತಿಯ ತೀವ್ರಪರಿಣಾಮ - ಇವು ಗುಣವಿಶೇಷಗಳು. ಹೀಗಾಗಿ ಇದು ಕನ್ನಡದ ಅನುಪಮ ಅನುಭಾವಸಾಹಿತ್ಯ, ವಿಶ್ವವಾಙ್ಮಯಕ್ಕೆ ಕನ್ನಡ ನೀಡಿದ ವಿಶಿಷ್ಟ ಸಾಹಿತ್ಯ ಎಂಬ ಕೀರ್ತಿ ಗಳಿಸಿದೆ. 
ವಚನಶಾಸ್ತ್ರ ಪಿತಾಮಹರೆನಿಸಿದ ಫ.ಗು.ಹಳಕಟ್ಟಿಯವರು ಪ್ರಥಮತಃ ವಚನ ಸಾಹಿತ್ಯವನ್ನು ಸಂಗ್ರಹಿಸಿ ಮುದ್ರಿಸಿದ ಮೇಲೆ ಕರ್ನಾಟಕ ವಿಶ್ವವಿದ್ಯಾಲಯವೂ ಬೆಂಗಳೂರಿನ ಬಸವ ಸಮಿತಿಯೂ ವಚನ ಸಾಹಿತ್ಯವನ್ನು ಪರಿಷ್ಕರಿಸಿ ಮುದ್ರಿಸುವ ಕೆಲಸವನ್ನು ಮಾಡಿವೆ. ಎಂ.ಆರ್.ಶ್ರೀನಿವಾಸಮೂರ್ತಿ,ಬಿ.ಶಿವಮೂರ್ತಿಶಾಸ್ತ್ರೀ, ಆರ್.ಸಿ.ಹಿರೇಮಠ, ಭೂಸನೂರುಮಠ, ಸ.ಸ.ಮಾಳವಾಡ, ಎಲ್.ಬಸವರಾಜು, ಎಂ.ಎಂ.ಕಲಬುರ್ಗಿ ಮೊದಲಾದ ವಿದ್ವಾಂಸರು ಈ ಕ್ಷೇತ್ರದಲ್ಲಿ ಗಣ್ಯ ಕೆಲಸ ಮಾಡಿದ್ದಾರೆ.	

20ನೆಯ ಶತಮಾನದಲ್ಲಿಯೂ ವಚನ ಕನ್ನಡ ಸಾಹಿತ್ಯಕ್ಕೇ ವಿಶಿಷ್ಟವಾದ ಒಂದು ಸಾಹಿತ್ಯಪ್ರಕಾರ. ಗದ್ಯವ ಅಲ್ಲದ ಪದ್ಯವೂ ಅಲ್ಲದ ಶಿವಶರಣರ ವಚನ ವಾಙ್ಮಯ ಲೋಕದ ಅನುಭಾವಸಾಹಿತ್ಯಕ್ಕೆ ಒಂದು ಶ್ರೀಮಂತ ಕೊಡುಗೆ. ಸುಮಾರು 12ನೆಯ ಶತಮಾನದ ಹೊತ್ತಿಗೆ ಯಶಸ್ಸಿನ ತುದಿಯನ್ನೇರಿದ ಈ ಸಾಹಿತ್ಯಪ್ರಕಾರ ಬರಬರುತ್ತಾ ತನ್ನ ಉಜ್ಜ್ವಲ ಕಾಂತಿಯನ್ನು ಕಳೆದುಕೊಂಡು ಕೊನೆಗೊಮ್ಮೆ ನಿಂತೇ ಹೋಯಿತು. ನಡುವೆ ಒಂದು ಸಲ ಅದರ ಪುನರುಜ್ಜೀವನದ ಪ್ರಯತ್ನ ನಡೆದಿರುವುದಕ್ಕೇನೋ ಸಾಹಿತ್ಯಚರಿತ್ರೆಯಲ್ಲಿ ಉಲ್ಲೇಖಗಳಿವೆ. ಆದರೆ ಯಶಸ್ಸಿನ ದಾಖಲೆಗಳಿಲ್ಲ. ಬಸವಣ್ಣ, ಅಕ್ಕಮಹಾದೇವಿ ಮೊದಲಾದವರು ಈ ಅಬಿsವ್ಯಕ್ತಿಮಾಧ್ಯಮದಲ್ಲಿ ತೋರಿದ ಕೌಶಲವೇ ಒಂದು ಜಲಚಿಹ್ನೆಯಾಗಿ ನಿಂತು ಹೋಯಿತು. ಇದನ್ನು ಅನುಸರಿಸಿದವರು, ಅನುಕರಿಸಿದವರು ಅನೇಕರು; ಆದರೆ ಮೀರಿದವರು ಮಾತ್ರ ಒಬ್ಬರೂ ಇಲ್ಲ. ಸರಳವಾದ ಮಾತುಗಳಲ್ಲಿ ಅನುಭವ ತೀವ್ರತೆಯನ್ನು ಪ್ರಾಮಾಣಿಕ ಆತ್ಮವಿಮರ್ಶೆಯಲ್ಲಿ ದಿಟ್ಟತನವನ್ನು, ಅಲಂಕಾರ ಭಾರವಿಲ್ಲದ ರಚನೆಯಲ್ಲಿ ಕಲೆಗಾರಿಕೆಯನ್ನು ಹೊಮ್ಮಿಸುವುದು ಮುಂದಿನವರಿಗೆ ಹೆಚ್ಚು ಸಾಧ್ಯವಾಗಲಿಲ್ಲ. ಆದರೂ ಪ್ರಯೋಗಪ್ರಿಯರಿಗೆ ವಚನಗಳ ಮಾದರಿ ಯಾವಾಗಲೂ ಒಂದು ಆಹ್ವಾನವಾಗಿ ಉಳಿದದ್ದರಲ್ಲಿ ಆಶ್ಚರ್ಯವಿಲ್ಲ. ವಿಚಾರಧಾರೆ, ಆವೇಶ, ಉತ್ಸಾಹಗಳು ಛಂದಸ್ಸಿನ ಚೌಕಟ್ಟಿನಲ್ಲಿ ಸಿಕ್ಕಿ ಸೊರಗದಿರಬೇಕಾದರೆ ವಚನದಂಥ ಒಂದು ಮಾಧ್ಯಮ ಎಲ್ಲ ಕಾಲಕ್ಕೂ ಸಮರ್ಪಕವಾಗಿ ಅಗತ್ಯವಾಗಿ ತೋರಿದ್ದರಲ್ಲಿಯೇ ಈ ಪ್ರಕಾರದ ಮಹತ್ತ್ವವಿದೆ. ಅಂತೆಯೇ ಹೊಸ ಸಾಹಿತ್ಯದಲ್ಲಿಯೂ ವಚನ ಪ್ರಕಾರ ಒಂದು ಪ್ರೇರಣೆಯ ಸೆಲೆಯಾಗಿದೆ; ಅನುಕರಣೆಗೆ ಮಾದರಿಯಾಗಿದೆ.
ಸಾಹಿತ್ಯಚರಿತ್ರೆಯ ಪರಿಭಾಷೆಯಲ್ಲಿ ನಮಗೆ ಪರಿಚಿತರಾಗಿರುವಂಥ ವಚನಕಾರರು ಇಂದು ಇಲ್ಲ. ಆದರೆ ಸಾಹಿತ್ಯಕ್ಷೇತ್ರದ ಬೇರೆ ಬೇರೆ ಪ್ರಕಾರಗಳಲ್ಲಿ ಇಂದು ಕೆಲಸ ಮಾಡುತ್ತಿರುವ ಅನೇಕರು ವಚನಗಳನ್ನು ರಚಿಸಿದ್ದಾರೆ. ಈ ಗದ್ಯಗೀತ ಪ್ರಕಾರದ ರೂಪಾಂಶಕ್ಕೆ ಹೊಸ ಲೇಖಕರಿಗೆ ಅನ್ಯಮೂಲಗಳ ಸ್ಫೂರ್ತಿಯೂ ಲಬಿsಸಿದೆ. ವಾಲ್ಟ್‌ ವಿಟ್ಮನ್ನನ ಹುಲ್ಲಿನ ದಳಗಳು, ರವೀಂದ್ರನಾಥ ಠಾಕೂರರ ಕವಿತೆಗಳ ಇಂಗ್ಲಿಷ್ ಅನುವಾದಗಳು ಈ ನಿಟ್ಟಿನಲ್ಲಿ ಒಡನೆಯೇ ನೆನಪಿಗೆ ಬರುವ ಮೂಲಗಳು.

ಸಮಕಾಲೀನರು ಅನೇಕರು ವಚನಗಳನ್ನು ಇಲ್ಲವೇ ರೂಪಾಂಶದಲ್ಲಿ ವಚನಗಳಿಗೆ ತೀರ ಹತ್ತಿರವಾದ ಕೃತಿಗಳನ್ನು ರಚಿಸಿದ್ದಾರೆ. ಸುಮಾರು ಇಪ್ಪತ್ತೆರಡು ಜನ ಲೇಖಕರು ಮೂವತ್ತಕ್ಕೂ ಹೆಚ್ಚು ಸಂಗ್ರಹಗಳನ್ನು ಪ್ರಕಟಿಸಿದ್ದಾರೆ. ಹದಿನೆಂಟು ಜನರ ವಚನಗಳು, ಬೇರೆ ಬೇರೆ ಗ್ರಂಥಗಳಲ್ಲಿ ಪತ್ರಿಕೆಗಳಲ್ಲಿ ಅಚ್ಚಾಗಿವೆ ಅಥವಾ ಹಸ್ತಪ್ರತಿಯ ರೂಪದಲ್ಲಿವೆ. ಈ ಲೇಖಕರಲ್ಲಿ ಮೂರೇ ಮೂರು ವಚಗಳನ್ನು ಬರೆದ ತೀ.ನಂ.ಶ್ರೀಕಂಠಯ್ಯನವರೂ ಮೂರು ಸಾವಿರದ ಐದುನೂರು ವಚನಗಳನ್ನು ಬರೆದು ಪ್ರಖ್ಯಾತರಾದ ಶ್ರೀಮನ್ನಿಡುಮಾಮಿಡಿ ಶ್ರೀಶೈಲ ಸೂರ್ಯಸಿಂಹಾಸನಾದಿsೕಶ್ವರ ಜಗದ್ಗುರು ಶ್ರೀ ಚೆನ್ನಬಸವರಾಜ ದೇಶಿಕೇಂದ್ರ ಮಹಾಸ್ವಾಮಿಗಳೂ (ಜಚನಿ) ಸೇರಿದ್ದಾರೆ; ಶಂಕರಮ್ಮ, ಓಂಕಾರಮ್ಮನವರ ಹಾಗೆ ವಾಚಕರಿಗೆ ಪರಿಚಯವೇ ಇಲ್ಲದವರೂ ನಾಡಿನಲ್ಲಿ ಮನೆಮಾತಾಗಿರುವ ಕುವೆಂಪು, ಬೆಂದ್ರೆಯವರೂ ಇದ್ದಾರೆ; ರಂಗಣ್ಣ, ದಿವಾಕರರಂಥ ಹಿರಿಯರೂ ಚಂದ್ರಶೇಖರ ಐತಾಳ, ಭೈರವಮೂರ್ತಿ ಯಂಥವರೂ ಸಿಂಪಿ ಲಿಂಗಣ್ಣನವರಂಥ ಮಾಸ್ತರರೂ ಸದಾಶಿವ ಶಿವಾಚಾರ್ಯರು, ಗಂಗಾಧರ ಶಿವಾಚಾರ್ಯರಂಥ ಮಠಾದೀಶರೂ ಜೋಳದರಾಶಿ ದೊಡ್ಡನಗೌಡರಂಥ ಗಮಕಿಗಳೂ ಈ ಪಟ್ಟಿಯಲ್ಲಿ ಬರುತ್ತಾರೆ. ಈ ಎಲ್ಲ ಲೇಖಕರು ಬರೆದಿರುವ ವಚನಗಳ ಸಂಖ್ಯೆ ಒಂದು ಅಂದಾಜಿನಂತೆ ಸುಮಾರು ಹತ್ತು ಸಾವಿರವಾಗುತ್ತದೆ. ಇದೇನು ಸಾಮಾನ್ಯವಾದ ಸಾಧನೆಯಲ್ಲ.

ರಚನೆಯ ವಿನ್ಯಾಸದ ದೃಷ್ಟಿಯಿಂದಲೂ ವಸ್ತುವೈವಿಧ್ಯದ ದೃಷ್ಟಿಯಿಂದಲೂ ಈ ವಚನಗಳು ನಾನಾ ಬಗೆಯಾಗಿವೆ. ಇವುಗಳಲ್ಲಿ ಪ್ರಾಚೀನ ಸಂಪ್ರದಾಯವಿದೆ, ಆಧುನಿಕ ವಿಚಾರಧಾರೆಯಿದೆ, ಆತ್ಮ ಶೋಧನೆಯಿದೆ, ಪ್ರಕೃತಿವರ್ಣನೆಯಿದೆ, ಭಕ್ತಿ ಇದೆ, ರಾಜಕೀಯವಿದೆ, ಭಾವುಕತೆಯಿದೆ, ವೈಚಾರಿಕತೆಯಿದೆ, ಪರದ ಆದರ್ಶವಿದೆ, ಇಹದ ವಾಸ್ತವಿಕತೆಯಿದೆ, ಮರಗಟ್ಟಿಕೊಂಡ ಪ್ರತಿಭೆಯೊಡನೆ ಕುಡಿಯೊಡೆದ ಪ್ರಜ್ಞೆಯಿದೆ. ಇಲ್ಲಿ ಅರಳಿದ ವಚನಗಳಿವೆ, ಕರುಳಿನ ವಚನಗಳಿವೆ; ಅನುಕರಿಸಿದ ವಚನಗಳಿಗೂ ಸೋಗಿನ ವಚನಗಳಿಗೂ ಬರವಿಲ್ಲ. ಈ ಆಧುನಿಕ ವಚನಸಾಹಿತ್ಯ ಮೈದಾಳಿರುವ ರೀತಿ, ಅದರ ಮುಖ್ಯ ಒಲವು ನಿಲುವುಗಳು, ಪ್ರವೃತ್ತಿಗಳು ವಿಸ್ತಾರವಾದ ಪ್ರತ್ಯೇಕ ಅಧ್ಯಯನಕ್ಕೆ ಅರ್ಹವಾಗಿವೆ.
ಆಧುನಿಕ ವಚನಕಾರರಲ್ಲಿ ಮೊದಲು ಗಮನ ಸೆಳೆಯುವ ಹೆಸರು ಎಸ್.ವಿ.ರಂಗಣ್ಣ ನವರದು. ಜಚನಿ ಅವರನ್ನು ಬಿಟ್ಟರೆ ರಂಗಣ್ಣನವರೇ ಅತಿ ಹೆಚ್ಚಿನ ಸಂಖ್ಯೆಯ ವಚನಗಳನ್ನು ಬರೆದಿದ್ದಾರೆ. ರಂಗಬಿನ್ನಪ ಎಂಬ ಹೆಸರಿನಲ್ಲಿ ಪ್ರಕಟವಾಗಿರುವ ಇವರ ವಚನಗಳು ಆಧುನಿಕ ಸಾಹಿತ್ಯದಲ್ಲಿ ಮೊತ್ತಮೊದಲಿಗೆ ವಚನಗಳನ್ನು ಬರೆಯನ್ನು ಕೀರ್ತಿ ಇವರಿಗೆ ತಂದುಕೊಟ್ಟಿವೆ. 1925ರ ಅಕ್ಟೋಬರ್ ತಿಂಗಳಿನಲ್ಲಿ ಅವರು ತಮ್ಮ ಪ್ರಥಮ ವಚನವನ್ನು ಬರೆದುದಾಗಿ ಹೇಳಿಕೊಂಡಿದ್ದಾರೆ. ಸುಮಾರು ಹತ್ತು ವರ್ಷಗಳ ಅನಂತರ (1934) ಇವರ ಹದಿನೈದು ವಚನಗಳನ್ನು ರಂಗಯ್ಯನ ವಚನಗಳು ಎಂಬ ಶೀರ್ಷಿಕೆಯಲ್ಲಿ ಪ್ರಬುದ್ಧ ಕರ್ಣಾಟಕ ಮೊದಲ ಬಾರಿಗೆ ಪ್ರಕಟಿಸಿತು. ಆಧುನಿಕರಲ್ಲಿ ಇದಕ್ಕಿಂತ ಮೊದಲು ಬೇರೊಬ್ಬರು ವಚನಗಳನ್ನು ಪ್ರಕಟಿಸಿರುವುದು ಗಮನಕ್ಕೆ ಬಂದಿಲ್ಲ. ಐತಿಹಾಸಿಕವಾಗಿ ಆಧುನಿಕ ವಚನಕಾರರಲ್ಲಿ ರಂಗಣ್ಣನವರು ಮೊದಲಿಗರಾಗಿರುವುದು ಮಾತ್ರವಲ್ಲದೆ ಈ ಸಾಹಿತ್ಯಪ್ರಕಾರಕ್ಕೆ ರಾಷ್ಟ್ರದ ಅತ್ಯುಚ್ಚ ಪ್ರಶಸ್ತಿಯನ್ನು ಗಳಿಸಿ ಸಫಲತೆಯನ್ನು ಪಡೆದಿದ್ದಾರೆ.

ಒಂದು ದೃಷ್ಟಿಯಿಂದ ದ.ರಾ.ಬೆಂದ್ರೆಯವರೇ ರಂಗಣ್ಣನವರಿಗಿಂತ ಮೊದಲು ವಚನಗಳನ್ನು ರಚಿಸಿದವರು ಎನ್ನಬೇಕು. ಇವರ ಪ್ರಖ್ಯಾತವಾದ ಕರುಳಿನ ವಚನಗಳು ಜಯ ಕರ್ನಾಟಕದಲ್ಲಿ 1931ರಲ್ಲಿ ಪ್ರಕಟವಾದರೂ ಅವನ್ನು ಪುರ್ಣಗೊಳಿಸಿದ್ದು 1942ರಲ್ಲಿಯೇ ಎಂದೂ ಅವರೇ ಹೇಳಿದ್ದಾರೆ. ಆದರೆ ರಂಗಣ್ಣನವರ ವಚನಗಳು ರಚನಾವಿನ್ಯಾಸದಲ್ಲಿ ವಚನಗಳ ಚೌಕಟ್ಟಿನಲ್ಲಿ ಬರುವ ಹಾಗೆ ಬೇಂದ್ರೆಯವರ ವಚನಗಳು ಬರುವುದಿಲ್ಲ ಎಂಬುದನ್ನು ನಾವು ಗಮನಿಸಬೇಕು. ಬೆಂದ್ರೆಯವರ ವಚನಗಳು ಹೆಚ್ಚು ಕಡಿಮೆ ಮುಕ್ತಛಂದಸ್ಸು ಸ್ವಚ್ಫಂದ ಗೀತೆಗಳೇ ಸರಿ. ಪ್ರಾಚೀನರ ವಚನಗಳು ಶುದ್ಧ ಪಾರಮಾರ್ಥಿಕ ಸಾಧನೆಯ ಮಾರ್ಗದೊಳಗಿನವು. ಕರುಳಿನ ವಚನಗಳೊ ಲೌಕಿಕ ಭಾವದ ಪ್ರಕಟನೆಗೆ ಬಳಸಿಕೊಂಡಂಥವು ಎಂಬ ಬೇಂದ್ರೆಯವರ ಮಾತುಗಳು ಸಹಜವಾಗಿ ವಸ್ತುವನ್ನುದ್ದೇಶಿಸುತ್ತವೆ. ರೂಪಾಂಶದಲ್ಲಿ ಅವು ಪ್ರಾಚೀನರ ವಚನಗಳಿಗಿಂತಲೂ ವಿಟ್ಮನ್, ಠಾಕೂರರ ಕೃತಿಗಳಿಗೆ ಹತ್ತಿರವಾದ ಗದ್ಯಗೀತಗಳು. ಕುವೆಂಪು ಅವರ ಕಿಂಕಿಣಿಗೂ ದಿವಾಕರರ ಅಂತರಾತ್ಮನಿಗೆ ಕೃತಿಗೂ ಈ ಮಾತುಗಳೇ ಅನ್ವಯವಾಗುತ್ತವೆ.

ರಂಗಣ್ಣನವರ ವಚನಗಳಲ್ಲಿ ಪ್ರಾಚೀನ ವಚನಗಳ ಪ್ರತಿಧ್ವನಿಯನ್ನು ಸ್ಪಷ್ಟವಾಗಿ ಕೇಳಬಹುದಾಗಿದೆ. ಇದು ಆ ಸಾಹಿತ್ಯ ಪ್ರಕಾರ ಹೊಸ ಕಾಲದ ಲೇಖಕರ ಮೇಲೆ ಪ್ರಭಾವ ಬೀರಿರುವುದಕ್ಕೆ ಒಂದು ಉದಾಹರಣೆಯೂ ಹೌದು. ಎಂಟುನೂರು ವರ್ಷಗಳಷ್ಟು ಹಿಂದಿನ ಆ ವಚನಗಳು ರೂಪಗೊಂಡ ಅನ್ಯಾದೃಶ ಸೊಗಸಿಗೆ, ಅವುಗಳಲ್ಲಿ ಅಬಿsವ್ಯಕ್ತಗೊಂಡ ನಿಚ್ಚಳ ಪ್ರಾಮಾಣಿಕತೆಗೆ, ತುಯ್ತ ತುಡಿತಗಳಿಗೆ ರಂಗಣ್ಣನವರ ಪ್ರತಿಭೆ ಸ್ಪಂದಿಸಿದ್ದರಲ್ಲಿ ಆಶ್ಚರ್ಯವಿಲ್ಲ. ಹೊಸ ಕಾಲಕ್ಕೆ ತಕ್ಕಂತೆ ಸಾಹಿತ್ಯವ ಹೊಸ ರೂಪವನ್ನು ಪಡೆಯುವುದು ಅನಿವಾರ್ಯವಾದುದರಿಂದ, ಈ ವಚನಗಳಾದರೂ ಪ್ರಾಚೀನದ ಪ್ರತಿರೂಪವಾದರೆ ಹೆಚ್ಚಿನದೇನನ್ನೂ ಸಾದಿಸುವಂತಿರಲಿಲ್ಲ. ಆಗಲೇ ವಚನಸಾಹಿತ್ಯಸೃಷ್ಟಿಯ ಎರಡನೆಯ ಆವರ್ತದಲ್ಲಿಯೆ ವಚನಗಳ ಬಣ್ಣ ಅಳಿಸಿರುವುದು, ಕಾವು ಕಳೆದಿರುವುದು, ದನಿ ಮಾಸಿರುವುದು ಸಾಹಿತ್ಯಚರಿತ್ರೆಯ ವಿದ್ಯಾರ್ಥಿಗಳಿಗೆ ತಿಳಿದಿದೆ. ಬದಲಾದ ಮೌಲ್ಯಗಳು ಸಾಹಿತ್ಯನಿರ್ಮಾಣದಲ್ಲಿ ಸ್ಪಂದಿಸದೆ ಹೋದರೆ ಎಲ್ಲ ಕಾಲದ ಕಥೆಯೂ ಹೀಗಾಗುತ್ತದೆ. ಹೊಸ ಕಾಲದ ವಚನ ಹೀಗಾಗಬಾರದೆಂಬುದನ್ನು ಆರಂಭಕ್ಕೇ ರಂಗಣ್ಣನವರು ಅರಿತುಕೊಂಡರು. ಅವರಿಗೆ ವಚನಕಾರರ ಸೃಷ್ಟಿಯ ಸೀಮೆಯ ಪರಿಚಯವಿತ್ತು, ಸೀಮಿತಗಳ ತಿಳಿವಳಿಕೆಯಿತ್ತು. ವಚನ ಅದೇ ರೂಪದಲ್ಲಿ ಉಳಿಯುವುದು ಸಾಧ್ಯವಿಲ್ಲ ಎನ್ನುವುದೂ ಅವರಿಗೆ ಖಚಿತವಾಯಿತು. ಆಧುನಿಕ ವಚನ ಯಾವ ರೂಪ ತಾಳಬೇಕೆಂಬುದಕ್ಕೆ ಅವರು ವಿವಿಧ ಪ್ರಯೋಗಗಳನ್ನು ನಡೆಸಿದರು. ಹೊಸ ಕಾಲದ ಲೇಖಕರ ಈ ನಿಟ್ಟಿನ ಎಲ್ಲ ಪ್ರಯತ್ನಗಳಿಗೂ ಅವರು ಆಚಾರ್ಯರಾದರು. ಕೆಲವು ಉದಾಹರಣೆಗಳು ಹೀಗಿವೆ:

ಕರ್ನಾಟಕ ಜನಪದವಿಂದು ಕುರಿಮಂದೆ, ನರಿಬಳಗ, ಹೆಬ್ಬಾವು ಸಂಸಾರ, ಎಮ್ಮೆ ದೊಡ್ಡಿ, ತಟ್ಟು ಕೊಟ್ಟಿಗೆ, ಇರುವೆ ಗೂಡು; ಎಲ್ಲವನ್ನು ಎಲ್ಲರನ್ನು ಎಳ್ಚರಿಸಿ ಇದಿರು ನಿಲ್ಲಿಸಿಕೊಂಡು, ಆಣತಿ ಪಾಲಿಸಯ್ಯ; ಕನ್ನಡವ ಕಾಪಿಡಲು ಸಂಕಲ್ಪ ತಿಳಿಸಯ್ಯ, ಕೌಸಲ್ಯ ಕಲಿಸಯ್ಯ.
ಏಳನೆಯ ಮಾಸದಲ್ಲಿ ಬಸುರಿ ಬಲಬಾಹುವಿಗೆ ಕನ್ನಡ ರಕ್ಷೆ ಕಟ್ಟಬೇಕು. ಶಿಶು ಜನಿಸಿದ ಒಡನೆ ತಿನ್ನಿಸುವ ಬಜೆಬೆಣ್ಣೆಯ ಜೊತೆಗೆ ಕನ್ನಡವ ಬೆರೆಸುವುದ ಮರೆಯಬಾರದು. ಅನ್ಯಭಾಷೆಯ ಅನ್ಯಾಯ ಕಾಮವೆನ್ನುವ ಸಾಂಕ್ರಾಮಿಕ ಜಾಡ್ಯ ಸೋಂಕದಿರಲು, ಆರು ತಿಂಗಳು ತೀರುವುದರೊಳಗೆ ಕನ್ನಡ ಸಿಡುಬು ಹಾಕಿಸಬೇಕು. ಆಮೇಲೆ ಸಮಸಂವತ್ಸರ ನಡೆಯುವಾಗ ಕತ್ತರಿಸಲಯ್ಯ ಕನ್ನಡಕೆ ಮುಡಿಯ, ಓನಾಮ ಹಬ್ಬಕ್ಕೆ ಸ್ವಾಮಿಯಾಗಿರಲಿ ಕನ್ನಡದಿಂದ ಮಾಡಿದ ಸಿದ್ಧಿವಿಘ್ನೕಶ. ವಿದ್ಯಾಭ್ಯಾಸ ಆಗಬೇಕು ಕನ್ನಡ ಹಲಗೆ ಬಳಪ ಬಾಲಬೋಧೆಗಳ ಬಳಸುತ್ತ. ಮುಂಜಿಯಲಿ ಕನ್ನಡ ಜನಿವಾರ ಕನ್ನಡ ಗಾಯತ್ರಿ; ಮದುವೆಯಲ್ಲಿ ಕನ್ನಡ ಬಾಸಿಂಗ, ಕನ್ನಡ ಮಾಂಗಲ್ಯ, ಕನ್ನಡ ಸಂಕಲಿಕೆ ಕನ್ನಡ ಧಾರೆಯಸೀರೆ. ತರುವಾಯ ಮನೆ ಕಟ್ಟಬೇಕು ಕನ್ನಡ ಇಟ್ಟಿಗೆ ದೂಲ ಹೆಂಚುಗಳಿಂದ; ಮೇಲೆ ಏರಿಸಬೇಕು ಕನ್ನಡ ಬಾವುಟವ. ದಿನದಿನವು ಕನ್ನಡದ ಆಹಾರ, ಕನ್ನಡದ ವಿಹಾರ, ಕನ್ನಡದಲ್ಲಿ ಶಯನ; ಎದ್ದೊಡನೆ ಕನ್ನಡದ ಸ್ಮರಣೆ, ಮಧ್ಯಾಹ್ನ ಕನ್ನಡ ಪುಜೆ. ಈ ನಾಡು ಆ ನಾಡು ನುಡಿಗಳೆಲ್ಲ ನೆಮ್ಮದಿಯ ದಾಸದಾಸಿಯರಾಗಿ ಓಡಾಡಿ ಗೆಯ್ಮೆ ದುಡಿದು ತಂದು ತುಂಬಿಸಲಿ ಕನ್ನಡ ಕುಟುಂಬದುಗ್ರಾಣವನ್ನು, ಕನ್ನಡ ಕುಲವ ಭಾರಿಯದಾಗಿ ಬೆಳೆಸಿ ಏಳಿಸಲಿ.

ಇಂಥ ಬಾಲ ಪದ್ಧತಿಯೆ ಕನ್ನಡಿಗನಿಗೆ ಸವಿ ಸಾರ್ಥಕವಾದ ನರಜನುಮದಾನಂದ ದೀಕ್ಷೆ; ಅಪ್ಪಣೆಯ ಹಾಡಯ್ಯ, ಅನುಕೂಲ ಮಾಡಯ್ಯ, ವಿದಿsಕೂಸ ಹೊಕ್ಕಳಲಿ ಹೆತ್ತವನೆ ರಂಗಯ್ಯ
ಹಾಗೆ ಕನಸಾಯ್ತು:
ನೆನ್ನೆ ಮೊನ್ನೆ ಸರ್ಕಾರದಾಶ್ರಯದಲ್ಲಿ
ಒಂದು ಗುಮಾಸ್ತಿಕೆಗಾಗಿ
ಪರೀಕ್ಷೆ ತೆಗೆದುಕೊಂಡ ವಾಲ್ಮೀಕಿ.
ಆ ವರ್ಷ ಸಾಹಿತ್ಯ ಪ್ರಶ್ನಪತ್ರಿಕೆಯಲ್ಲಿ
ರಾಮಾಯಣವ ಕುರಿತು ಕೆಲವ ಕೇಳಿತ್ತು
ವಾಲ್ಮೀಕಿ ತೇರ್ಗಡೆಯಾಗಲಿಲ್ಲ!
ಏತಕ್ಕೆ ಆಗಲಿಲ್ಲ?
ಗೋವಿಂದರಾಜ ತಿಲಕ ಮಹೇಶ್ವರ ತೀರ್ಥ
ಯಾವೊಂದು ವ್ಯಾಖ್ಯಾನವನು ಅವ ಓದಿಯೇ ಇರಲಿಲ್ಲ
ಎನ್ನಜ್ಞಾನ, ರಂಗ ಸರ್ವಜ್ಞ!

ಇಂದಿನ ವಚನಗಳಿಗೂ ಹಿಂದಣ ವಚನಗಳಿಗೂ ಕೆಲವು ವಿಚಾರಗಳಲ್ಲಿ ಸಾದೃಶ್ಯ ವೈದೃಶ್ಯಗಳಿರುವುದನ್ನು ನಾವು ಗಮನಿಸಬಹುದು: ಹಿಂದಿನ ವಚನಗಳ ತಿರುಳು ಭಕ್ತಿ, ವಿಚಾರ ಮತ್ತು ವಿಮರ್ಶೆ. ಹೊಸ ಕಾಲದ ವಚನಗಳು ವಿಚಾರವಿಮರ್ಶೆಗಳ ಜೊತೆಗೆ ಆರಿಸಿಕೊಂಡದ್ದು ವಚನರಚನೆಯ ವಿಧಾನವನ್ನು. ವಚನಗಳ ಒಂದು ಸಾಮಾನ್ಯ ಲಕ್ಷಣ ಅವುಗಳಲ್ಲಿ ಕಂಡುಬರುವ ಲಯಬದ್ಧತೆ. ಯಾವುದೇ ಬದ್ಧತೆ ಮುಕ್ತತೆಗಳಿಂದ ಬೇರೆಯಾಗಿ ವಚನಗಳು ಗದ್ಯಪದ್ಯದ ಒಂದು ನಡುವಣ ಸ್ಥಿತಿಯಲ್ಲಿವೆ. ವಚನಗಳ ಲಯದ ಪ್ರಾಸಾದಿಕತೆ ಅವುಗಳ ಉಗಮವನ್ನು ಹಾಡುಗಳಲ್ಲೊ ತ್ರಿಪದಿಗಳಲ್ಲೊ ಕಾಣುವಂತೆ ಅನೇಕ ವಿದ್ವಾಂಸರನ್ನು ಪ್ರಚೋದಿಸಿದೆ. ಒಂದು ನಿರ್ದಿಷ್ಟವಾದ ಛಂದಸ್ಸಿನ ಚೌಕಟ್ಟಿನಿಂದ ವಚನವನ್ನು ಹೊರ ಗೆಳೆಯಬೇಕಾಗಿಲ್ಲ. ಭಾವಭರಿತ ವಾದ, ಆವೇಶಯುಕ್ತವಾದ ಮಾತು ತನಗೆ ತಾನೇ ಲಯಬದ್ಧವ ನಾದ ಮಯವ ಆಗುತ್ತದೆ. ಭಾಷೆ ಆರಂಭ ಗೊಂಡಾಗ ಅದು ನಾದಯುಕ್ತ ವಾಗಿತ್ತೆಂದೇ ಅನೇಕ ವಿದ್ವಾಂಸರು ಅಬಿಪ್ರಾಯಪಡುತ್ತಾರೆ. ಇಂದಿನ ವೃತ್ತಪತ್ರಿಕೆಗಳ ವರದಿರೂಪದ ಬರೆಹಗಳಲ್ಲಿಯೂ ಭಾಷೆಯ ಅನಿವಾರ್ಯ ಅಂಶವಾದ ಲಯಗುಣವನ್ನು ಗುರುತಿಸಬಹುದು. ಆದುದರಿಂದ ವಚನಗಳಲ್ಲಿ ಭಾಷೆಯ ಈ ಸಹಜ ಲಯ, ಭಾವತೀವ್ರತೆ ಅನುಭವತೀವ್ರತೆಗಳಿಂದಾಗಿ ಮಿಕ್ಕ ಕಡೆಗಳಿಗಿಂತ ಸ್ಪಷ್ಟವಾಗಿ ಮೈದೋರಿದೆಯೆಂಬುದನ್ನು ಗಮನಿಸಿದರೆ ಸಾಕು. ಈ ದೃಷ್ಟಿಯಿಂದ ಇಂದಿನ ವಚನಗಳನ್ನು ಹಳೆಯ ವಚನಗಳೊಂದಿಗೆ ಹೋಲಿಸಿ ಪರಿಶೀಲಿಸಿದಾಗ, ಇಂದಿನ ವಚನಗಳ ಬಂಧದಲ್ಲಿ ಒಂದು ಬಗೆಯ ಶಿಥಿಲತೆ ಕಾಣಿಸುತ್ತದೆ. ಹಳೆಯ ವಚನಗಳಲ್ಲಿ ಹಾಡುಗಬ್ಬಗಳ ಒಲವಿದ್ದರೆ ಇಂದಿನವು ಓದುಗಬ್ಬಗಳಾಗಿವೆ. ಅಂದಿನ ವಚನಗಳಲ್ಲಿ ಅಲ್ಲಲ್ಲಿ ತ್ರಿಪದಿಗಳೇ ಹುದುಗಿ ಕೊಂಡಿದ್ದರೆ, ಇಂದಿನ ವಚನಗಳಲ್ಲಿ ಎಷ್ಟೋ ಕಡೆ ತೆಳುವಾದ ಒರಟು ಗದ್ಯವಿದೆ.

ತಂತ್ರದ ದೃಷ್ಟಿಯಿಂದ ಇನ್ನೊಂದು ಸಾಮಾನ್ಯ ಅಂಶವೆಂದರೆ, ಪ್ರಾಚೀನ ವಚನಗಳು ಬರೆದವರ ಗುಪ್ತ ಅಂಕಿತಗಳನ್ನೊಳಗೊಂಡಿರುವುದು. ಮಧ್ಯಕಾಲದ ಭಕ್ತಿ ಸಾಹಿತ್ಯದ ಒಂದು ಪ್ರಧಾನ ಲಕ್ಷಣ ಇದು. ಹೆಚ್ಚು ಕಡಿಮೆ ಇಂದಿನ ವಚನಕಾರರೆಲ್ಲ ಈ ಸಂಪ್ರದಾಯವನ್ನು ಉಳಿಸಿಕೊಂಡು ಬಂದಿದ್ದಾರೆ. ಕುವೆಂಪು, ಬೇಂದ್ರೆ ಅವರಿಗೆ ವಚನ ಬರೆಹ ಕೇವಲ ಒಂದು ಕಾವ್ಯವಿಧಾನ, ಅಷ್ಟೆ. ಅವರಂತೆಯೆ ಸಿಂಪಿ ಲಿಂಗಣ್ಣ, ವಾಮನ ಭಟ್ಟ ಮೊದಲಾದವರಿಗೆ ಅಂಕಿತದ ಅಗತ್ಯ ತೋರಲಿಲ್ಲ. ಆರ್.ಬಾಳ ಮೊದಲಾದ ಇನ್ನೂ ಕೆಲವರಿಗೆ ಇದರಲ್ಲಿ ಯಾವುದೇ ವಿಧದ ಕಟ್ಟುನಿಟ್ಟಿಲ್ಲ. ರಂಗಣ್ಣ, ಜಚನಿ, ಪರಮೇಶ್ವರ ಭಟ್ಟ ಅವರಂಥವರಿಗೆ ಇದು ತಾಂತ್ರಿಕ ಅನಿವಾರ್ಯತೆ. ದಿವಾಕರರ ಒಳನುಡಿಗಳಲ್ಲಿಯೂ ಅಂತರಾತ್ಮನನ್ನು ಕುರಿತು ಸಂಬೋಧನೆಯಿದೆ.
ಮತಾತೀತವಾದ ಭಕ್ತಿಯನ್ನೂ ಲೌಕಿಕ ಜೀವನದ ವಿವಿಧ ನಿಲವುಗಳನ್ನೂ ಅಬಿವ್ಯಕ್ತ ಗೊಳಿಸಿರುವುದು ಆಧುನಿಕ ವಚನಗಳ ಒಂದು ಸಾಧನೆಯಾಗಿದೆ. ಜಚನಿ ಅವರನ್ನುಳಿದು ಇತರ ವೀರಶೈವ ಮಠಾದೀಶರು ರಚಿಸಿದ ವಚನಗಳು ತೀರ ಸೀಮಿತವಾದ ಧಾರ್ಮಿಕ ಪರಿಸರದಲ್ಲಿ ಸುಂದರವಾಗಿ ಅರಳದೆ ಹೋಗಿವೆ. ಜಚನಿ ಅವರ ಆರಂಭದ ವಚನಗಳನ್ನು ಅವರ ಈಚಿನ ವಚನಗಳೊಂದಿಗೆ ಹೋಲಿಸಿದಾಗ ವೈವಿಧ್ಯ ಕುಂದಿರುವುದು ಸ್ಪಷ್ಟವಾಗುತ್ತದೆ. ದೊಡ್ಡನಗೌಡರು, ಜೀರಿಗೆಕಟ್ಟೆ ಬಸಪ್ಪನವರು ಮೊದಲಾದವರು ಸಂಪ್ರದಾಯದ ವಚನಗಳಿಂದ ಸಂಪುರ್ಣವಾಗಿ ಪ್ರಭಾವಿತರಾಗಿದ್ದರೂ ಲೌಕಿಕವನ್ನು ಕಡೆಗಣಿಸುವುದಿಲ್ಲ. ದಿವಾಕರ ಹಾಗೂ ಸಿಂಪಿಯವರ ವಚನಗಳಲ್ಲಿ ಅತೀಂದ್ರಿಯ ಪ್ರಜ್ಞೆಯ ಪುಣ್ಯಸ್ಪರ್ಶದಿಂದ ಪುಳಕಿತಗೊಳ್ಳುವ ಕವಿಚೇತನದ ಕಂಪನವಿದೆ:

ವಿಜ್ಞಾನಿಗಳಿಗೆ ಅಜ್ಞಾನವಾಗಿ ಕಾಡಿತ್ತು ಮಾಯೆ
ಸತ್ಯರಿಗೆ ಅಸತ್ಯವಾಗಿ ಕಾಡಿತ್ತು ಮಾಯೆ
ಸಾಹಿತಿಗಳಿಗೆ ಸಂಪ್ರದಾಯವಾಗಿ ಕಾಡಿತ್ತು ಮಾಯೆ
ವಿರಾಗಿಗೆ ಅನುರಾಗವಾಗಿ ಕಾಡಿತ್ತು ಮಾಯೆ
ಹಿರಿಯರಿಗೆ ಕಿರುಕುಳವಾಗಿ ಕಾಡಿತ್ತು ಮಾಯೆ
ಶ್ರೀ ನಿಡುಮಾಮಿಡಿ ಶ್ರೀಗಿರಿ ಸೂರ್ಯಸಿಂಹಾಸನಾಧೀಶ್ವರ
ಮಾಯಾ ಮೋಹಕೆ ಮರುಳಾಗದವರ ಕಾಣೆನಯ್ಯ
ಹೊಟ್ಟೆಯ ಪಾಡಿಂಗೆ ಪಟ್ಟಕ್ಕೇರುವವರಿಗೆ
ನುಡಿಸೇವೆಯ ಮಾತೇಕೆ, ನಾಡಸೇವೆಯ ದಂದುಗವೇಕೆ?
ವಂದನೆಗೆ ಆಶಿಸುವರು; ಪರನಿಂದೆಗೆ ಆನಂದಿಸುವರು
ಶ್ರೀ ನಿಡುಮಾಮಿಡಿ ಶ್ರೀಗಿರಿ ಸೂರ್ಯಸಿಂಹಾಸನಾಧೀಶ್ವರನ
ಸುಖಸಾರಾಯವು ಅವರಿಗೆ ರುಚಿಸದು
ಸೀಮೆ ರಾಜನಿಗಲ್ಲದೆ ರಸಜ್ಞನಿಗುಂಟೆ?
ಸೀಮೆ ವಾರಿದಿsಗಲ್ಲದೆ ವಾಙ್ಮಯಕ್ಕುಂಟೆ?
ಸೀಮೆ ರಸಾನ್ನಕ್ಕುಂಟಲ್ಲದೆ ರಸೋಕ್ತಿಗುಂಟೆ? 
ಶ್ರೀನಿಡುಮಾಮಿಡಿ ಶ್ರೀಗಿರಿ ಸೂರ್ಯಸಿಂಹಾಸನಾಧೀಶ್ವರ
ಸೀಮಾತೀತ ಸಾಹಿತಿ; ಸೀಮಾತೀತ ಸಾಹಿತ್ಯ

ಬೇಂದ್ರೆಯವರ ಕರುಳಿನ ವಚನಗಳಲ್ಲಿ ವಾತ್ಸಲ್ಯಭಾವ ಮಡುಗಟ್ಟಿದ್ದರೆ, ಕುವೆಂಪು ಅವರು ಕಿಂಕಿಣಿಯ ನಾದದಲ್ಲಿ ಆತ್ಮಶೋಧನೆಗೆ ತೊಡಗುತ್ತಾರೆ. ರಂಗಣ್ಣನವರ ವಿಮರ್ಶನ ಪ್ರಜ್ಞೆ ವಿಶ್ವವ್ಯಾಪಕವಾದುದು: ಪರಮೇಶ್ವರ ಭಟ್ಟರು ಸಮಕಾಲೀನ ಜೀವನದ ಸಣ್ಣಪುಟ್ಟ ಸಂಗತಿಗಳಿಗೆ ವಿಲಕ್ಷಣವಾದ ತಿರುವು ಕೊಡುತ್ತಾರೆ. ಚಂದ್ರಶೇಖರ ಐತಾಳರ ವಚನಗಳ ಕೇಂದ್ರಬಿಂದು ತಾಯಿ, ತಾಯಿತನ. ಮೊತ್ತದಲ್ಲಿ ಇಂದಿನ ವಚನ ಸೆಕ್ಯುಲರ್ ಆಗಿದೆ. ಅಂದಮಾತ್ರಕ್ಕೆ ಅದು ಆರ್ತತೆಯನ್ನು, ಆತ್ಮನಿರೀಕ್ಷಣೆಯನ್ನು, ಆನಂದಾನುಭವವನ್ನು ಕಡೆಗಣಿಸಿದೆ ಎಂದು ಅರ್ಥವಲ್ಲ. ಹಿಂದಿನ ವಚನಗಳಲ್ಲಿ ಒಂದೇ ಸಮನೆ ಕೇಳಿಸುತ್ತಿದ್ದುದು, ಪರಮಾತ್ಮನನ್ನು ಅರಸುತ್ತಿದ್ದ ಆತ್ಮದ ಕರೆ, ಈ ಹಾದಿಯಲ್ಲಿ ಕಲ್ಲು ಮುಳ್ಳು ಕಸ ಇರಬಾರದೆಂದು ಪದೇ ಪದೇ ಒತ್ತಿಹೇಳುವ ಶುಚಿಜೀವನದ ಸಂದೇಶ. ಇಂದಿನ ವಚನಗಳಿಗಾದರೊ ಬೇಲಿಯಿಲ್ಲ. ಜೀವನದ ವಿಸ್ತಾರವನ್ನೆಲ್ಲ ಅವು ಆವರಿಸುತ್ತವೆ. ಸಂಕೀರ್ಣ ಬದುಕಿನ ಎಲ್ಲ ಪದರಗಳನ್ನೂ ವರ್ಣಿಸಲು ಅವು ಸಮರ್ಥವಾಗಿವೆ. ಅಂದರೆ 12ನೆಯ ಶತಮಾನದಲ್ಲಿ ವಚನ ಸಾದಿsಸಿದುದನ್ನೆಲ್ಲ ಇಂದು ಸಾದಿsಸಲಾಗದು. ಅದನ್ನು ನಿರೀಕ್ಷಿಸುವುದೂ ಸಾಧ್ಯವಿಲ್ಲ; ಸಾಧುವೂ ಅಲ್ಲ. ಅಂದಿನವರೆದುರಿಗಿದ್ದುದು ಒಂದೇ ಧ್ಯೇಯ: ಕಾವ್ಯ ಶುದ್ಧ ಜೀವನ ಸಂಹಿತೆ. ಇಂದಿನ ಲೇಖಕನೋ ಸಂಕೀರ್ಣತೆಯ ಶಿಶು. ಭಾಷೆಯಾದರೋ ಅಂದಿನವರು ನಡೆದುದೆ ದಾರಿ: ಇಂದು ಮಾರ್ಗನಿರ್ಮಾಣ ಸುಲಭವಲ್ಲ.

ಪರಮೇಶ್ವರಭಟ್ಟರು ವಚನಗಳನ್ನು ಬರೆದವರಲ್ಲಿ ಅತ್ಯಂತ ಮುಖ್ಯರು. ಜಚನಿ ಹಾಗೂ ರಂಗಣ್ಣನವರನ್ನುಳಿದರೆ ಭಟ್ಟರೇ ಹೆಚ್ಚು ಸಂಖ್ಯೆಯ ವಚನಗಳನ್ನು ಬರೆದಿರುವವರು. ಅವರ ಉಪ್ಪು ಕಡಲು ಸಂಗ್ರಹದಲ್ಲಿ 705 ವಚನಗಳಿವೆ. ಇದು ಆಧುನಿಕ ಕನ್ನಡ ಸಾಹಿತ್ಯದ ಶ್ರೇಷ್ಠ ಕೃತಿಗಳಲ್ಲೊಂದು. ಭಟ್ಟರ ಪರಿಣತ ಕೃತಿಯೂ ಹೌದು. ಯಶಸ್ಸಿನ ದೃಷ್ಟಿಯಿಂದಲಂತೂ ಅವರ ರಚನೆಗಳು ವಿಶೇಷ ಉಲ್ಲೇಖಕ್ಕೆ ಅರ್ಹವಾದವು. ಇವನ್ನು ಹೋಲಿಸಬಹುದಾದರೆ ಕೇವಲ ರಂಗಣ್ಣನವರ ವಚನಗಳೊಂದಿಗೆ ಮಾತ್ರ. ಹಾಗೆ ಮಾಡಿದರೂ ರಂಗಣ್ಣನವರ ವಚನಗಳಲ್ಲಿ ಅಷ್ಟಾಗಿ ಕಾಣಿಸದ ಕೆಲವು ಗುಣಗಳೂ ಭಟ್ಟರ ವಚನಗಳಲ್ಲಿ ಕಾಣಿಸುತ್ತವೆ.

ರಂಗಣ್ಣನವರು ಪ್ರಧಾನವಾಗಿ ಪಂಡಿತರು, ವಿಮರ್ಶಕರು. ಅವರ ವಚನಗಳಾದರೂ ಪಾಂಡಿತ್ಯವಿಮರ್ಶೆಯಿಂದಲೇ ತುಂಬಿವೆ ಎನ್ನಬಹುದು. ರಂಗಣ್ಣನವರ ಜೀವನಾನುಭವ ದೊಡನೆ ಅವರ ವ್ಯಾಪಕವಾದ ಅಧ್ಯಯನ ಸ್ಪದಿರ್sಸುತ್ತಿರುವಂತೆ ಕಾಣುತ್ತದೆ. ಭಟ್ಟರು ಕೇವಲ ವಿಮರ್ಶಕರಲ್ಲ, ಕವಿಗಳೂ ಹೌದು. ಅವರ ವಚನಗಳಲ್ಲಿ ಯಥೇಚ್ಫವಾಗಿ ಕಾವ್ಯ ಹೊಳಹು ಹಾಕಿದೆ. ತಾಂತ್ರಿಕವಾಗಿ ಇಬ್ಬರೂ ಪ್ರಾಚೀನ ವಚನಗಳಿಗೆ ಸರಿಸಮನಾದ ರಚನೆಗಳನ್ನು ಮಾಡಿದ್ದಾರೆ. ಆದರೆ ಭಟ್ಟರ ವಚನಗಳಲ್ಲಿ ವಚನರೂಪ ಖಚಿತಗೊಂಡಿರುವ ಹಾಗೆ ರಂಗಣ್ಣನವರ ವಚನಗಳಲ್ಲಿ ಕಾಣಿಸುವುದಿಲ್ಲ. ಸದಾಶಿವ ಗುರುವಿಗೆ ಭಟ್ಟರು ಮೊರೆ ಹೋಗುವುದರಲ್ಲಿ ಅಬಿsವ್ಯಕ್ತವಾಗುವ ಆರ್ತತೆ ಉತ್ಕಟತೆಗಳು ರಂಗಣ್ಣನವರು ಮಾವಿನಕೆರೆಯ ಅದಿದೈವಕ್ಕೆ ಪ್ರಾರ್ಥನೆ ಸಲ್ಲಿಸುವಾಗ ತೋರುವುದಿಲ್ಲ. ರಂಗಬಿನ್ನಪದ ವೈಚಾರಿಕತೆ ಭಾಷಣಾತ್ಮಕವಾದುದ್ದು; ಉಪ್ಪುಕಡಲಿನ ವೈಚಾರಿಕತೆ ನಿವೇದನಾತ್ಮಕವಾದದ್ದು, ಮೊದಲನೆಯದರಲ್ಲಿ ನಿರೂಪಣೆ; ಎರಡನೆಯದರಲ್ಲಿ ತೋಡಿಕೆ. ರಂಗಯ್ಯ ಆತ್ಮವನ್ನು ಮರೆಯದಿದ್ದರೂ ಲೋಕಕ್ಕೆ ಸನಿಹದವನು; ಸದಾಶಿವಗುರು ಲೋಕವನ್ನು ಕಡೆಗಾಣದಿದ್ದರೂ ಆತ್ಮಕ್ಕೆ ಹತ್ತಿರದವನು. 

ಈ ವಚನಗಳಲ್ಲಿ ಕಡಲಿನ ಆಳ ವೈಶಾಲ್ಯ ವೈವಿಧ್ಯಗಳನ್ನು ವರ್ಣಿಸುವ ನೆಪದಲ್ಲಿ ಕವಿ ಮನುಷ್ಯನ ಅಲ್ಪತೆಗಳನ್ನೆಲ್ಲ ಎತ್ತಿ ಆಡಿದ್ದಾನೆ. ಈ ವಚನಗಳು ಕಡಲಿನ ಒಂದು ವರ್ಣಮಯ ಆಲ್ಬಂ. ಇಲ್ಲಿಯ ಕಡಲಿನ ಮೊರೆತ ಮಾನವಹೃದಯದ ತುಯಿತ; ಇದು ಅಪ್ಪಳಿಸುವುದಿಲ್ಲ, ಸ್ಪರ್ಶಿಸುತ್ತದೆ; ಭೋರ್ಗರೆಯುವುದಿಲ್ಲ ಪಿಸುಗುಡುತ್ತದೆ. ಕಡಲ ಕಥನಕ್ಕೆ ಮೀಸಲಾದ ಈ ವಚನಗಳ ಜೀವನದ ವಿಮರ್ಶೆಯಿದೆ; ಅನುಭವದ ತುಡಿತವಿದೆ; ಆತ್ಮವಿಮರ್ಶೆಯ ಕೆಚ್ಚಿದೆ. ಬದುಕಿನ ನಾನಾಮುಖಗಳಲ್ಲಿ ಕಂಡು ಉಂಡ ಅನುಭವ ಈ ವಚನಗಳಲ್ಲಿ ತೊಟ್ಟಿಕ್ಕುತ್ತದೆ. ಇವುಗಳ ವಸ್ತು ನಿತ್ಯಜೀವನ. ಇವುಗಳ ನಿರ್ವಹಣೆಯಲ್ಲಿ ಪ್ರತಿಭೆಯಿದೆ, ಪಾಂಡಿತ್ಯವಿದೆ, ವ್ಯುತ್ಪತ್ತಿಯಿದೆ. ಇಲ್ಲಿಯ ಎಷ್ಟೋ ಸಂಗತಿಗಳು ಪರಮೇಶ್ವರ ಭಟ್ಟರ ಮಿಕ್ಕ ಕೃತಿಗಳನ್ನು ಬಲ್ಲವರಿಗೆ ಹೊಸವಲ್ಲ. ಅವರ ಅನೇಕ ವಿಚಾರಗಳು ಇಲ್ಲಿ ರೂಪಾಂತರಗೊಂಡಿರುವುದನ್ನು ಗಮನಿಸಬಹುದು. ಪ್ರತಿಮೆ ಉಪಮೆ ಹೋಲಿಕೆ ಮೊದಲಾದ ಈ ವಚನಗಳ ಪರಿಕರಗಳು ಬಹುವಾಗಿ ಸಮಕಾಲೀನ ಜೀವನದಿಂದ ಎತ್ತಿಕೊಂಡವು. ಸ್ಕೂಟರ್ ಮೇಲೆ ಹೋಗುತ್ತಿರುವ ಗಂಡಹೆಂಡಿರು ಆಧುನಿಕ ದಾಂಪತ್ಯಕ್ಕೆ ಅದ್ಭುತ ಸಂಕೇತವಾಗಬಲ್ಲರು:

ಸ್ಕೂಟರು ನಡೆಸುವ ಗಂಡನ ಮುಖ ಪಯಣದ ದಿಕ್ಕಿಗೆ              
ಮನೆಯ ಕಡೆಗೆ!
ಹಿಂದೆ ಕುಳಿತ ಹೆಂಡತಿಯ ಮುಖ ಬೀದಿಯ ದಿಕ್ಕಿಗೆ 
ಅಂಗಡಿಯ ಕಡೆಗೆ!
ಹೀಗೆ ಪತಿಯ ಮುಖ ಅತ್ತ ಸತಿಯ ಮುಖ ಇತ್ತ!
ಆದರೇನು ಒಮ್ಮುಖವಾದರೆ ಚಿತ್ತಸುಖವದುವೆ ಸದಾಶಿವಗುರು

ಇಲ್ಲಿನ ಮಾತುಗಳು ಒಡೆಯುವುದಕ್ಕೂ ಸಂಕೇತ, ಕೂಡುವುದಕ್ಕೂ ಸಂಕೇತ. ಎರಡೇ ಸಾಲುಗಳಲ್ಲಿ ಭಾರತ ದೇಶದ ಸ್ವಾತಂತ್ರ್ಯೋತ್ತರ ಪರಿಸ್ಥಿತಿಯನ್ನು ವರ್ಣಿಸಿರುವ ರೀತಿ:

  ನಮ್ಮ ದೇಶಕ್ಕೆ ಸ್ವಾತಂತ್ರ್ಯದ ಜತೆಗೆ ಸ್ವೈರ ಬಂತು
  ಮಗುವಿಗೆ ಮಾತಿನ ಜತೆಗೆ ಉಗ್ಗು ಬಂದಂತೆ ಸದಾಶಿವಗುರು ಬದುಕಿನ ಹೊಣೆಗಾರಿಕೆಯನ್ನು ಆತ್ಮವಿಶ್ವಾಸವನ್ನು ಹೇಳುವ ಹೊಸ ವಿಧಾನ:
  ಬ್ರೇಕಿಲ್ಲದ ಬೆಲ್ಲಿಲ್ಲದ ಲೈಟಿಲ್ಲದ ಲೈಸೆನ್ಸಿಲ್ಲದ ಸೈಕಲ್ಲನು ಮೆಟ್ಟೆಂದೆ
  ಟಾರಿಲ್ಲದ ಕಲ್ಲಿಲ್ಲದ ಈ ಹೊಳ್ಳದೆ ಈ ಕೊಳ್ಳದೆ ನಡೆಯೆಂದೆ
  ಆದರೂ ನಾನೆದೆಗೆಡದೆಯೆ ಎಡೆಬಿಡದೆಯೆ ಪೆಡಲೊತ್ತುವೆ
  ಮುಂದಾಗುವೆ ಗುರಿಮುಟ್ಟುವೆ ಸದಾಶಿವಗುರು

ಒಂದು ಪಂಕ್ತಿಯಿಂದ ಹಿಡಿದು ಮುಕ್ಕಾಲು ಪುಟದವರೆಗೆ ಸಾಮಾನ್ಯವಾಗಿ ಇವರ ವಚನಗಳ ವ್ಯಾಪ್ತಿ. ಅವುಗಳ ರಚನಾವಿನ್ಯಾಸ ಎಲ್ಲ ವಿವರಗಳಲ್ಲಿಯೂ ಸಂಪುರ್ಣವಾಗಿ ಪ್ರಾಚೀನದ ಶ್ರೇಷ್ಠ ವಚನಗಳನ್ನು ನೆನಪಿಗೆ ತರುತ್ತವೆ. ರೂಪಾಂಶದ ದೃಷ್ಟಿಯಿಂದ ಎಷ್ಟೋ ಸಂದರ್ಭಗಳಲ್ಲಿ ಈ ವಚನಗಳನ್ನು ಹಳೆಯ ವಚನಗಳಿಂದ ಬೇರ್ಪಡಿಸುವುದು ಕೂಡ ಸಾಧ್ಯವಾಗುವುದಿಲ್ಲ. ಭಟ್ಟರ ಪ್ರಾಸಪ್ರಯೋಗಗಳು ವಿಚಿತ್ರ ರೀತಿಯಲ್ಲಿ ಪರಿಣಾಮವನ್ನುಂಟುಮಾಡುತ್ತವೆ. ಪರಿಚಿತ ಪ್ರಸಂಗಗಳಿಗೆ, ಮಾತುಗಳಿಗೆ ಭಟ್ಟರು ತರುವ ಅನಿರೀಕ್ಷಿತ ತಿರುವಿನಿಂದಲೆ ಒಂದು ಸ್ವಾರಸ್ಯ ಉಂಟಾಗುತ್ತದೆ. ಹಳೆಯ ಗಾದೆಯ ಮಾತುಗಳಿಗೆ ಅವರು ವಿಲಕ್ಷಣ ಪ್ರತಿಕ್ರಿಯೆಯನ್ನೊದಗಿಸುತ್ತಾರೆ. ಪದಗಳಲ್ಲಿ ತೀರ ಹೊಸ ಅರ್ಥವನ್ನು ಅವರು ಒಮ್ಮೊಮ್ಮೆ ಹೊಮ್ಮಿಸಬಲ್ಲರು. ಆತ್ಮವಿಮರ್ಶೆ ಈ ವಚನಗಳಲ್ಲಿ ತಾನೇ ತಾನಾಗಿ ತುಂಬಿಕೊಂಡಿದೆ. ಒಟ್ಟಿನಲ್ಲಿ ಆಧುನಿಕ ವಚನಸಾಹಿತ್ಯದ ಬೆಳಸು ಆಶಾದಾಯಕವಾಗಿದೆ ಎನ್ನಬಹುದು. ಇಂದು ವಚನ ಸಾಹಿತ್ಯ ಸಾಕಷ್ಟು ಹೊಸ ವಿಚಾರಗಳನ್ನು ತೆಗೆದುಕೊಂಡು ಬೆಳೆಯುತ್ತಿದೆ. ಮಾತೆ ಮಹಾದೆವಿಯವರಿಂದ ಹಿಡಿದು ಹಲವು ಹತ್ತು ಕವಿಗಳು ಕವಯಿತ್ರಿಯರು ಈ ಕ್ಷೇತ್ರದಲ್ಲಿ ಕೆಲಸಮಾಡುತ್ತಿದ್ದಾರೆ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ